3ನೇ ಹಂತದ ಚುನಾವಣೆ ನಂತರ ಪ್ರಧಾನಿಗೆ ಆತಂಕ: ಖರ್ಗೆ
ಹೈದರಾಬಾದ್, ಮೇ 10: ಲೋಕಸಭೆ ಚುನಾವಣೆಯ ಮೂರನೇ ಹಂತದ ನಂತರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿ ಅಮಿತ್ ಶಾ ಆತಂಕಗೊಂಡಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷವನ್ನು ನಿಂದಿಸಲು ಪ್ರಾರಂಭಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʻಬಿಜೆಪಿ ನಾಯಕರು ತಾವು ಮಾಡಿದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳುವ ಬದಲು ಕಾಂಗ್ರೆಸ್ ನಾಯಕರನ್ನು ನಿಂದಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಭಾಷಣಗಳನ್ನು ತಿರುಚುತ್ತಿದ್ದಾರೆ. ಅದು ಅಗತ್ಯವಿರಲಿಲ್ಲ,ʼ ಎಂದರು.
ʻಕಾಂಗ್ರೆಸ್ ಅದಾನಿ ಮತ್ತು ಅಂಬಾನಿಗಳಿಂದ ಟೆಂಪೋ ಲೋಡ್ ಹಣ ಪಡೆಯುತ್ತಿದ್ದಾಗ, ಪ್ರಧಾನಿ ಮೋದಿ ಏನು ಮಾಡುತ್ತಿದ್ದರು? ಮೂರನೇ ಹಂತದ ಚುನಾವಣೆ ಬಳಿಕ ಚಿಂತೆಗೀಡಾಗಿರುವ ಮೋದಿ ಮತ್ತು ಶಾ, ತಮ್ಮ ಪ್ರಣಾಳಿಕೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರು. ಬದಲಾಗಿ, ಕಾಂಗ್ರೆಸ್ ಅನ್ನು ನಿಂದಿಸಲಾರಂಭಿಸಿದರುʼ ಎಂದರು.
ʻಎಂ ಅಕ್ಷರದಿಂದ ಆರಂಭವಾಗುವ ಮಂಗಳಸೂತ್ರ, ಮಟನ್ ಮತ್ತು ಮೊಘಲ್ ಪದಗಳನ್ನು ಪ್ರಧಾನಿ ಮೋದಿ ಇಷ್ಟಪಡುತ್ತಾರೆ. ಅವ ರು ಬಾಲಿಶ ಭಾಷೆ ಬಳಸುವುದು ಒಳ್ಳೆಯದಲ್ಲ.ಕಾಂಗ್ರೆಸ್ ನಾಯಕರ ಭಾಷಣಗಳನ್ನು ತಿರುಚಿ, ಶೆಹಜಾದೆ ಎಂದು ನಿಂದಿಸುತ್ತಾರೆʼ ಎಂದು ಹೇಳಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಆರರಲ್ಲಿ ಐದು ಭರವಸೆಗಳನ್ನು ಪೂರೈಸಿದೆ. ಮಾದರಿ ನೀತಿ ಸಂಹಿತೆಯಿಂದಾಗಿ ಉಳಿದವು ಬಾಕಿ ಉಳಿದಿವೆ ಎಂದು ಖರ್ಗೆ ಹೇಳಿದರು.