4ನೇ ಹಂತದ ಮತದಾನ ಪ್ರಮಾಣ ಶೇ.67.25ಕ್ಕೆ ಏರಿಕೆ
x

4ನೇ ಹಂತದ ಮತದಾನ ಪ್ರಮಾಣ ಶೇ.67.25ಕ್ಕೆ ಏರಿಕೆ


ಹೊಸದಿಲ್ಲಿ, ಮೇ 13- ಹಿಂದಿನ ಹಂತಗಳಿಗೆ ಹೋಲಿಸಿದರೆ ಸೋಮವಾರ ನಡೆದ ಲೋಕಸಭೆ ಚುನಾವಣೆಯ ನಾಲ್ಕನೇ ಹಂತದಲ್ಲಿ ಮತ ಚಲಾವಣೆ ಪ್ರಮಾಣ ಹೆಚ್ಚಿದ್ದು, ಶೇ.67.25 ರಷ್ಟು ಮತದಾನವಾಗಿದೆ. ಇದು 2019 ರ ಸಂಸತ್ತಿನ ಚುನಾವಣೆಗೆ ಹೋಲಿಸಿದರೆ, ಶೇ.1.74 ಅಧಿಕ.

ಕ್ಷೇತ್ರ ಮಟ್ಟದ ಅಧಿಕಾರಿಗಳು ಅಂಕಿಅಂಶ ನವೀಕರಿಸುವುದನ್ನು ಮುಂದುವರಿಸುತ್ತಾರೆ ಎಂದು ಆಯೋಗ ಹೇಳಿದೆ. 4ನೇ ಹಂತದಲ್ಲಿ ಒಟ್ಟು 96 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 379 ಸ್ಥಾನಗಳಲ್ಲಿ ಮತದಾನ ಪೂರ್ಣಗೊಂಡಿದೆ.ಜೊತೆಗೆ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನವೂ ಪೂರ್ಣಗೊಂಡಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ನಾಲ್ಕನೇ ಹಂತದಲ್ಲಿ ಶೇ.65.51ರಷ್ಟು ಮತದಾನವಾಗಿತ್ತು. ಆನಂತರ ಒಂಬತ್ತು ರಾಜ್ಯಗಳ 71 ಕ್ಷೇತ್ರ ಗಳಲ್ಲಿ ಮತದಾನ ನಡೆಯಿತು. 2024ರ ಚುನಾವಣೆಯ ಮೊದಲ ಹಂತದಲ್ಲಿ ಶೇ.66.14 ರಷ್ಟು ಮತದಾನವಾಗಿದೆ. 2019ರಲ್ಲಿ ಶೇ.69.43ರಷ್ಟು ಮತದಾನವಾಗಿತ್ತು.ಏಪ್ರಿಲ್ 26 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ.69.64 ಹಾಗೂ 2019 ರಲ್ಲಿ ಶೇ. 66.71 ಮತದಾನವಾಗಿತ್ತು. ಮೂರನೇ ಹಂತದಲ್ಲಿ ಶೇ.65.68 ಹಾಗೂ 2019ರಲ್ಲಿ ಶೇ. 68.4 ರಷ್ಟು ಮತದಾನ ಆಗಿತ್ತು.

ನಿಗದಿತ ವಿಧಾನದ ಪ್ರಕಾರ, ಮತದಾನದ ಒಂದು ದಿನದ ನಂತರ ಅಭ್ಯರ್ಥಿಗಳು ಅಥವಾ ಅವರ ಅಧಿಕೃತ ಮತಗಟ್ಟೆ ಏಜೆಂಟರ ಸಮ್ಮುಖ ದಲ್ಲಿ ಪರಿಶೀಲನೆ ನಡೆಯುತ್ತದೆ. ಮರುಮತದಾನದ ನಿರ್ಧಾರವನ್ನು ಆನಂತರ ತೆಗೆದುಕೊಳ್ಳಲಾಗುತ್ತದೆ. ಪರಿಶೀಲನೆ ನಂತರ ಮತ್ತು ಮರು ಮತದಾನದ ಪ್ರಮಾಣ ಆಧರಿಸಿ, ಮೇ 17 ರೊಳಗೆ ಲಿಂಗವಾರು ಮತದಾನ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ ಎಂದು ಚುನಾವಣೆ ಆಯೋಗ ಹೇಳಿದೆ.

ಮತದಾರರ ನಿರಾಸಕ್ತಿಗೆ ಉಷ್ಣಅಲೆ ಪರಿಸ್ಥಿತಿ ಕಾರಣ. ಮತದಾರರ ನೋಂದಣಿ ಮತ್ತು ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಆಯೋಗ ಪ್ರಯತ್ನ ಮಾಡುತ್ತಿದೆ. ಮೆಟ್ರೋ ನಗರಗಳಲ್ಲಿನ ಕಳಪೆ ಮತದಾನಕ್ಕೆ ಯುವಜನರ ನಿರಾಸಕ್ತಿ ಕಾರಣ. ಕಾನೂನಿನನ್ವಯ ಮತದಾರರಾಗಿ ನೋಂದಣಿ ಮಾಡಿಸುವುದು ಮತ್ತು ಮತ ಚಲಾಯಿಸುವುದು ಕಡ್ಡಾಯವಲ್ಲ. ಆದ್ದರಿಂದ, ಜನರ ಮನವೊಲಿಕೆ ಮಾಡಲಾಗುತ್ತಿದೆ ಎಂದು ಆಯೋಗ ಹೇಳಿದೆ.

Read More
Next Story