ದೆಹಲಿ-ಎನ್‌ಸಿಆರ್‌ನ 100ಕ್ಕೂಅಧಿಕ ಶಾಲೆಗಳಿಗೆ ಬಾಂಬ್ ಹುಸಿ ಬೆದರಿಕೆ
x

ದೆಹಲಿ-ಎನ್‌ಸಿಆರ್‌ನ 100ಕ್ಕೂಅಧಿಕ ಶಾಲೆಗಳಿಗೆ ಬಾಂಬ್ ಹುಸಿ ಬೆದರಿಕೆ


ಬುಧವಾರ (ಮೇ 1)- ದೆಹಲಿ-ಎನ್‌ಸಿಆರ್‌ನ 100 ಕ್ಕೂ ಹೆಚ್ಚು ಶಾಲೆಗಳ ಆಡಳಿತ ಮಂಡಳಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಇದು ಹುಸಿ ಕರೆ. ಗಾಬರಿಯಾಗುವ ಅಗತ್ಯವಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ. ಬಾಂಬ್ ಬೆದರಿಕೆ ಬಂದಿರುವ ಎಲ್ಲಾ ಶಾಲೆಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಆದರೆ, ಏನೂ ಪತ್ತೆಯಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ʻದಿಲ್ಲಿಯ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿವೆ. ದೆಹಲಿ ಪೋಲೀಸರು ಪ್ರೋಟೋಕಾಲ್ ಪ್ರಕಾರ ಎಲ್ಲ ಶಾಲೆಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಆಕ್ಷೇಪಾರ್ಹ ವಸ್ತುಗಳು ಕಂಡುಬಂದಿಲ್ಲ. ಈ ಕರೆಗಳು ಸುಳ್ಳು ಎದು ತೋರುತ್ತಿದೆ. ಸಾರ್ವಜನಿಕರು ಭಯಭೀತರಾಗಬೇಡಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಿʼ ಎಂದು ದೆಹಲಿ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿವರ ವರದಿ ಕೇಳಿದ ಎಲ್‌ಜಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಪೊಲೀಸ್ ಆಯುಕ್ತರಿಂದ ವಿಸ್ತೃತ ವರದಿ ಕೇಳಿದ್ದಾರೆ.

ಮಯೂರ್ ವಿಹಾರದ ಮದರ್ ಮೇರಿ ಶಾಲೆ, ದ್ವಾರಕಾದ ದೆಹಲಿ ಪಬ್ಲಿಕ್ ಸ್ಕೂಲ್, ಚಾಣಕ್ಯಪುರಿಯ ಸಂಸ್ಕೃತಿ ಶಾಲೆ, ವಸಂತ್ ಕುಂಜ್‌ನ ದೆಹಲಿ ಪಬ್ಲಿಕ್ ಸ್ಕೂಲ್, ಸಾಕೇತ್‌ನ ಏಮಿಟಿ ಸ್ಕೂಲ್ ಮತ್ತು ನೋಯ್ಡಾ ಸೆಕ್ಟರ್ 30 ರ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ಬಾಂಬ್ ಬೆದರಿಕೆ ಕರೆ ಪಡೆದ ಶಾಲೆಗಳಲ್ಲಿ ಸೇರಿವೆ.

ಇಮೇಲ್‌ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಶಾಲೆಗಳ ಮಕ್ಕಳನ್ನು ಸ್ಥಳಾಂತರಿಸಲಾಯಿತು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಪತ್ತೆ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಶಾಲೆಗಳಿಗೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಯ್ಡಾದ ಡಿಪಿಎಸ್‌ನಲ್ಲಿ ತರಗತಿ ಅಮಾನತುಗೊಳಿಸಲಾಗಿದೆ ಮತ್ತು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ. ʻಪೊಲೀಸರು ಶಾಲೆಗಳ ತಪಾಸಣೆ ಮಾಡುತ್ತಿದ್ದಾರೆ. ಇತರ ಅಗತ್ಯ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತಿದೆ. ಹೆಚ್ಚಿನ ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಮೇಲ್ ಬಂದಿದೆ. ಒಬ್ಬ ವ್ಯಕ್ತಿಯ ಕೈವಾಡವಿದೆ ಎಂದು ಶಂಕಿಸಲಾಗಿದೆʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿ ಪೊಲೀಸ್ ವಿಶೇಷ ಕೋಶ ಸೇರಿದಂತೆ ಭದ್ರತಾ ಏಜೆನ್ಸಿಗಳು ಇಮೇಲ್‌ನ ಮೂಲವನ್ನು ಹುಡುಕುತ್ತಿವೆ.

Read More
Next Story