ದೂರದರ್ಶನದ ಲಾಂಛನ ಬದಲು: ವಿವಾದ ಸೃಷ್ಟಿಸಿದ ಕೇಸರಿ ಲೋಗೋ
x

ದೂರದರ್ಶನದ ಲಾಂಛನ ಬದಲು: ವಿವಾದ ಸೃಷ್ಟಿಸಿದ ಕೇಸರಿ ಲೋಗೋ


ದೂರದರ್ಶನ ಲಾಂಛನವನ್ನು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಾಯಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದೆ.

ಡಿಡಿ ನ್ಯೂಸ್‌ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ ಈ ಪ್ರಕಟಣೆ ಮಾಡಲಾಗಿದೆ. ʻನಮ್ಮ ಮೌಲ್ಯಗಳು ಅದೇ ಆಗಿರುತ್ತವೆ. ಈಗ ಹೊಸ ಅವತಾರದಲ್ಲಿ ಲಭ್ಯವಿದ್ದೇವೆ. ಹಿಂದೆಂದೂ ಇಲ್ಲದಂತಹ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ...ಹೊಸ ಡಿಡಿ ನ್ಯೂಸ್ ಅನ್ನು ಅನುಭವಿಸಿ.ʼ ದೂರ ದರ್ಶನದ ಇಂಗ್ಲಿಷ್ ಸುದ್ದಿವಾಹಿನಿ ಡಿಡಿ ನ್ಯೂಸ್, ಇತ್ತೀಚೆಗೆ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಲೋಗೋದಲ್ಲಿ ಬಣ್ಣ ಬದಲಿಸಿರುವುದು ಬಹಿರಂಗಗೊಂಡಿದೆ.

ಹೊಸ ಲೋಗೋ ಆನ್‌ಲೈನ್‌ನಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಚುನಾವಣೆಗೆ ಮೊದಲು ಬಣ್ಣ ಬದಲಿಸಿರುವುದನ್ನು ಹಲವರು ಪ್ರಶ್ನಿಸಿದ್ದಾರೆ. ದೂರದರ್ಶನದ ಮಾತೃ ಸಂಸ್ಥೆ ಪ್ರಸಾರ ಭಾರತಿ ಮಾಜಿ ಮುಖ್ಯಸ್ಥ, ಟಿಎಂಸಿ ಸಂಸದ ಜವಾಹರ್ ಸರ್ಕಾರ್, ʻಚುನಾವಣೆಗೆ ಮೊದಲು ದೂರದರ್ಶನದ ಲೋಗೋ ʻಕೇಸರಿಕರಣʼ ನೋವುಂಟುಮಾಡುತ್ತದೆ,ʼ ಎಂದು ಹೇಳಿದ್ದಾರೆ.

ಪ್ರಸಾರ ಭಾರತಿ ಮೇಲೆ ವಾಗ್ದಾಳಿ: ʻದೂರದರ್ಶನ ತನ್ನ ಲೋಗೋವನ್ನು ಕೇಸರಿ ಬಣ್ಣಕ್ಕೆ ಬದಲಿಸಿದೆ! ಮಾಜಿ ಸಿಇಒ ಆದ ನಾನು ಕೇಸರಿಕರಣವನ್ನು ಎಚ್ಚರಿಕೆಯಿಂದ ನೋಡುತ್ತಿದ್ದೇನೆ; ಇದು ಪ್ರಸಾರ ಭಾರತಿ ಅಲ್ಲ, ಪ್ರಚಾರ ಭಾರತಿ,ʼಎಂದು ಆನ್‌ಲೈನ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಸರ್ಕಾರ್‌ 2012 ರಿಂದ 2016 ರವರೆಗೆ ಪ್ರಸಾರ ಭಾರತಿಯ ಸಿಇಒ ಆಗಿದ್ದರು. ʻರಾಷ್ಟ್ರೀಯ ಪ್ರಸಾರ ಸಂಸ್ಥೆ ಕೇಸರಿ ಬಣ್ಣವನ್ನು ಆಯ್ಕೆ ಮಾಡಿರುವುದು ಅನುಚಿತ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆʼ ಎಂದು ಹೇಳಿದ್ದಾರೆ. ʻಇದು ಕೇವಲ ಲೋಗೋ ಅಲ್ಲ; ಎಲ್ಲ ಸಾರ್ವಜನಿಕ ಪ್ರಸಾರ ಕೇಸರಿಮಯವಾಗಿದೆ. ಆಡಳಿತ ಪಕ್ಷದ ಕಾರ್ಯಕ್ರಮಗಳಿಗೆ ಗರಿಷ್ಠ ಪ್ರಸಾರ ಸಮಯ ಸಿಗುತ್ತದೆ. ವಿರೋಧ ಪಕ್ಷಗಳಿಗೆ ಪ್ರವೇಶ ಸಿಗುವುದಿಲ್ಲʼ ಎಂದು ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕೇಂದ್ರದ ಮಾಜಿ ಮಾಹಿತಿ ಮತ್ತು ಪ್ರಸಾರ ಸಚಿವ ಮತ್ತು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ,ʻಲೋಗೋ ಬಣ್ಣ ಬದಲಾವಣೆ ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಮೋದಿ ಆಡಳಿತದ ಪ್ರಯತ್ನʼ ಎಂದು ಆರೋಪಿಸಿದರು. ಇಂಡಿಯಾ ಟುಡೇ ಟಿವಿ ಜೊತೆಗಿನ ವಿಶೇಷ ಸಂವಾದದಲ್ಲಿ ತಿವಾರಿ, ʻಸರ್ಕಾರಿ ಸಂಸ್ಥೆಗಳನ್ನು ಕೇಸರಿಮಯಗೊಳಿಸುವ ಮತ್ತು ವಶಪಡಿಸಿಕೊಳ್ಳುವ ಪ್ರಯತ್ನ. ಪ್ರಸಾರ ಭಾರತಿಯ ತಟಸ್ಥತೆ ಮತ್ತು ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತದೆʼ ಎಂದು ಹೇಳಿದರು.

ಆರೋಪ ನಿರಾಕರಣೆ: ಪ್ರಸಾರ ಭಾರತಿ ಸಿಇಒ ಗೌರವ್ ದ್ವಿವೇದಿ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ದೃಶ್ಯ ಸೌಂದರ್ಯಪ್ರಜ್ಞೆಗೆ ಅನುಗುಣವಾಗಿ ಬಣ್ಣವನ್ನು ಬದಲಿಸಲಾಗಿದೆ. ಅದು ಕಿತ್ತಳೆ ಬಣ್ಣʼ ಎಂದರು. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿ,ʻ ಜನರು ತಪ್ಪಾಗಿ ಗ್ರಹಿಸುತ್ತಿರುವುದು ದುರದೃಷ್ಟಕರ. ಕಳೆದ ಆರರಿಂದ ಎಂಟು ತಿಂಗಳು ಗಳಿಂದ ಡಿಡಿಯ ನೋಟ ಮತ್ತು ಸಂವೇದನೆಯನ್ನು ಬದಲಿಸಲು ಕೆಲಸ ಮಾಡುತ್ತಿದ್ದೇವೆʼ ಎಂದು ಹೇಳಿದರು.

ಖಾದಿ ವಸ್ತ್ರ: ದೂರದರ್ಶನ ಕೇಂದ್ರ ಕಳೆದ ತಿಂಗಳಿನಿಂದ ಸುದ್ದಿ ನಿರೂಪಕರು ಖಾದಿ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಪ್ರಸಾರ ಭಾರತಿ ಮತ್ತು ಖಾದಿ ಇಂಡಿಯಾ ಸೆಪ್ಟೆಂಬರ್ 2023 ರಲ್ಲಿ ಈ ಸಂಬಂಧ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ʻಪ್ರತಿ ದಿನ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಗೆ ಸಲ್ಲಿಸುವ ಬೆಳಗಿನ ಪ್ರಾರ್ಥನೆಯನ್ನು ನೇರ ಪ್ರಸಾರ ಮಾಡಲಾಗುವುದುʼ ಎಂದು ಡಿಡಿ ಘೋಷಿಸಿತು.

ಡಿಡಿಯ ಜಾಡು: 1959ರಲ್ಲಿ ದೂರದರ್ಶನವನ್ನು ಆರಂಭಿಸಿದಾಗ, ಅದು ಕೇಸರಿ ಲೋಗೋವನ್ನು ಹೊಂದಿತ್ತು ಎಂದು ವರದಿಯಾಗಿದೆ. ಆನಂತರ, ನೀಲಿ, ಹಳದಿ ಮತ್ತು ಕೆಂಪು ಬಣ್ಣಕ್ಕೆ ಬದಲಿಸಲಾಯಿತು. ಆದರೆ, ಗೋಳವನ್ನು ಕೇಂದ್ರವಾಗುಳ್ಳ ಎರಡು ದಳಗಳು ಉಳಿದುಕೊಂಡಿದ್ದವು. ಲೋಗೋದಲ್ಲಿದ್ದ ʻಸತ್ಯಂ ಶಿವಂ ಸುಂದರಂʼ ನ್ನು ತೆಗೆದುಹಾಕಲಾಯಿತು.

ದೂರದರ್ಶನ ಸೆಪ್ಟೆಂಬರ್ 15, 1959 ರಂದು ಮೊದಲ ಪ್ರಸಾರ ಆರಂಭಿಸಿತು.1975 ರ ಹೊತ್ತಿಗೆ ಮುಂಬೈ, ಅಮೃತಸರ ಮತ್ತು ಇತರ ನಗರ ಗಳಿಗೆ ವಿಸ್ತರಿಸಿತು. ಏಪ್ರಿಲ್ 1, 1976 ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಡಿ ಬಂದಿತು ಮತ್ತು 1982 ರಲ್ಲಿ ರಾಷ್ಟ್ರೀಯ ಪ್ರಸಾರ ಚಾನೆ‌ಲ್‌ ಆಯಿತು. 1984 ರಲ್ಲಿ ಇನ್ನಷ್ಟು ಚಾನಲ್‌ಗಳನ್ನು ಸೇರಿಸಿಕೊಂಡಿತು. ಪ್ರಸ್ತುತ ಆರು ರಾಷ್ಟ್ರೀಯ ಮತ್ತು 17 ಪ್ರಾದೇಶಿಕ ಚಾನೆಲ್‌ಗಳನ್ನು ನಿರ್ವಹಿಸುತ್ತಿದೆ.

Read More
Next Story