ಮೋದಿ ಬಿಜೆಪಿಯ ಪ್ರಧಾನಿ: ಪವಾರ್
ಏಪ್ರಿಲ್ 20- ಮೋದಿ ಅವರ ಭಾಷಣಗಳು ಅವರು ʻಬಿಜೆಪಿಯ ಪ್ರಧಾನಿʼ ಎಂದು ಸೂಚಿಸುತ್ತವೆಯೇ ಹೊರತು ದೇಶದ ಪ್ರಧಾನಿ ಎಂದಲ್ಲ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಶನಿವಾರ ಹೇಳಿದರು.
ಪ್ರಧಾನಿ ಮೋದಿ ಮತ್ತು ಅವರ ಪಕ್ಷ ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವ ಬದಲು ಬಿಜೆಪಿ ದೇಶಕ್ಕಾಗಿ ಏನು ಮಾಡುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಹೇಳಿದರು.
ಬಿಜೆಪಿಯ ಪ್ರಧಾನಿ: ʻನಾನು ಇಲ್ಲಿಗೆ ಬರುವ ಮುನ್ನ ಪ್ರಧಾನಿಯವರ ಭಾಷಣ ಕೇಳುತ್ತಿದ್ದೆ. ಅವರ ಮಾತು ಕೇಳಿದರೆ ಅವರು ಬಿಜೆಪಿಯ ಪ್ರಧಾನಿಯೇ ಹೊರತು ದೇಶದ ಪ್ರಧಾನಿಯಲ್ಲ ಎಂದು ಅನಿಸುತ್ತಿದೆ. ಅವರು ಜವಹರ ಲಾಲ್ ನೆಹರು ಇಲ್ಲವೇ ರಾಹುಲ್ ಗಾಂಧಿ ಮತ್ತು ಕೆಲವೊಮ್ಮೆ ನನ್ನನ್ನು ಟೀಕಿಸುತ್ತಾರೆ. ನೆಹರು ತಮ್ಮ ಜೀವನದ 10 ವರ್ಷಗಳನ್ನು ಬ್ರಿಟಿಷರ ವಿರುದ್ಧ ಹೋರಾಡಿ ಜೈಲಿನಲ್ಲಿ ಕಳೆದರು ಮತ್ತು ವಿಜ್ಞಾನವನ್ನು ಪ್ರೋತ್ಸಾಹಿಸಿದರುʼ ಎಂದು ಪವಾರ್ ಹೇಳಿದರು. ಪಿಎಂ ಮೋದಿ ಶನಿವಾರ ನಾಂದೇಡ್ ಮತ್ತು ಪರ್ಭಾನಿ ಕ್ಷೇತ್ರಗಳಲ್ಲಿ ನಡೆಸಿದ ಸಭೆಯಲ್ಲಿ ಪ್ರತಿಪಕ್ಷಗಳ ಮೇಲೆ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮರಾಠವಾಡ ಕುರಿತು ಮಾತನಾಡಿ, ʻಈ ಪ್ರದೇಶ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಭೀಕರ ಬರಗಾಲವಿದೆ. ಆದರೆ, ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಮಯವಿಲ್ಲʼ ಎಂದು ಟೀಕಿಸಿದರು.
ಔರಂಗಾಬಾದ್‌ನಲ್ಲಿ ಎಐಎಂಐಎಂನ ಹಾಲಿ ಸಂಸದ ಇಮ್ತಿಯಾಜ್ ಜಲೀಲ್, ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿಯಿಂದ ಅಫ್ಸರ್ ಖಾರ್ ಕಣದಲ್ಲಿದ್ದಾರೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಅಭ್ಯರ್ಥಿಯನ್ನು ಘೋಷಿಸಬೇಕಿದೆ. ಜಲ್ನಾದಲ್ಲಿ ಬಿಜೆಪಿಯ ಹಾಲಿ ಸಂಸದ ರಾವ್ಸಾಹೇಬ್ ದಾನ್ವೆ ವಿರುದ್ಧ ಕಾಂಗ್ರೆಸ್ ನಿಂದ ಕಲ್ಯಾಣ್ ಕಾಳೆ ಕಣಕ್ಕಿಳಿದಿದ್ದಾರೆ. ಔರಂಗಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮಹಾ ವಿಕಾಸ್ ಅಘಾಡಿ (ಎಂವಿಎ) ಅಭ್ಯರ್ಥಿ ಚಂದ್ರಕಾಂತ್ ಖೈರೆ ಮತ್ತು ಕಲ್ಯಾಣ್ ಕಾಳೆ ಅವರ ಪರ ಪ್ರಚಾರ ನಡೆಸಿದರು.