ಯುಕೆ ಹೈಕಮಿಷನ್ ದಾಳಿ: ಖಲಿಸ್ತಾನ್ ನಾಯಕನ ಬಂಧನ
x

ಯುಕೆ ಹೈಕಮಿಷನ್ ದಾಳಿ: ಖಲಿಸ್ತಾನ್ ನಾಯಕನ ಬಂಧನ


ಹೊಸದಿಲ್ಲಿ, ಏ.25- ಲಂಡನ್ನಿನಲ್ಲಿರುವ ಭಾರತೀಯ ಹೈಕಮಿಷನ್‌ ಮೇಲೆ ಕಳೆದ ಮಾರ್ಚ್‌ನಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವ್ಯಕ್ತಿಯೊಬ್ಬರನ್ನು ಗುರುವಾರ ಬಂಧಿಸಿದೆ.

ಇಂಗ್ಲೆಂಡಿನ ಹೌನ್ಸ್ಲೋ ನಿವಾಸಿ ಇಂದರ್‌ಪಾಲ್ ಸಿಂಗ್ ಗಾಬಾ ಬಂಧಿತರು. ಮಾರ್ಚ್ 22, 2023 ರಂದು ಲಂಡನ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದರು ಎಂದು ಎನ್‌ಐಎ ಹೇಳಿದೆ. ಆದರೆ, ಎಲ್ಲಿಂದ ಬಂಧಿಸಲಾಯಿತು ಎಂಬ ವಿವರ ನೀಡಿಲ್ಲ.ಕಳೆದ ವರ್ಷ ಮಾರ್ಚ್ 19 ಮತ್ತು 22 ರಂದು ಲಂಡನ್‌ನಲ್ಲಿ ನಡೆದ ಘಟನೆಗಳು ಭಾರತೀಯ ಮಿಷನ್‌ಗಳು ಮತ್ತು ಅದರ ಅಧಿಕಾರಿಗಳ ಮೇಲಿನ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ.

ಘಟನೆ ಏನು?: ಖಲಿಸ್ತಾನಿ ಪರ ಪ್ರತಿಭಟನಾಕಾರರು ಲಂಡನ್ನಿನಲ್ಲಿರುವ ಭಾರತೀಯ ಮಿಷನ್‌ ನ್ನು ಮಾರ್ಚ್ 19 ರಂದು ಧ್ವಂಸಗೊಳಿಸಲು ಪ್ರಯತ್ನಿಸಿ ದ್ದರು ಮತ್ತು ರಾಷ್ಟ್ರಧ್ವಜವನ್ನು ಕೆಳಕ್ಕೆ ಎಳೆದಿದ್ದರು. ಈ ದಾಳಿಯು ಮಾರ್ಚ್ 18, 2023 ರಂದು ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ತೆಗೆದುಕೊಂಡ ಕ್ರಮಕ್ಕೆ ಪ್ರತೀಕಾರ ಎನ್ನಲಾಗಿದೆ. 2023ರ ಏಪ್ರಿಲ್ 23 ರಂದು ಮೊಗಾದ ರೋಡೆ ಗ್ರಾಮದಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಅಮೃತಪಾಲ್ ಸಿಂಗ್ ನನ್ನು ಬಂಧಿಸಲಾಗಿತ್ತು. ಈತ 'ವಾರಿಸ್ ಪಂಜಾಬ್ ದೇ' ಸಂಘಟನೆಯ ಮುಖ್ಯಸ್ಥನಾಗಿದ್ದು, ಒಂಬತ್ತು ಸಹಚರರೊಂದಿಗೆ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿದ್ದಾರೆ.

ಎನ್‌ಐಎಗೆ ವರ್ಗಾವಣೆ: ಎನ್‌ಐಎ ಕಳೆದ ವರ್ಷ ಜೂನ್‌ನಲ್ಲಿ ಐದು ವಿಡಿಯೋ ಬಿಡುಗಡೆ ಮಾಡಿ, ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿ ಯಾಗಿರುವ ವ್ಯಕ್ತಿಗಳನ್ನು ಗುರುತಿಸಲು ಸಾರ್ವಜನಿಕರ ನೆರವು ಕೋರಿತ್ತು. ದೆಹಲಿ ಪೊಲೀಸರ ವಿಶೇಷ ಕೋಶದಿಂದ ಎನ್‌ಐಎ ಕಳೆದ ಏಪ್ರಿಲ್‌ನಲ್ಲಿ ತನಿಖೆಯನ್ನು ವಹಿಸಿಕೊಂಡಿದೆ.

Read More
Next Story