
ಇವಿಎಂ ಪ್ರಶ್ನಿಸಿದ ಅರ್ಜಿಗಳು 40 ಬಾರಿ ತಿರಸ್ಕೃತ: ಇಸಿ
ಹೊಸದಿಲ್ಲಿ, ಏ.26- ʻವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಕನಿಷ್ಠ 40 ಬಾರಿ ನ್ಯಾಯಾಲಯಗಳು ತಿರಸ್ಕರಿಸಿವೆʼ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಇವಿಎಂಗಳು ಶೇ. 100 ರಷ್ಟು ಸುರಕ್ಷಿತ ಮತ್ತು ನ್ಯಾಯಯುತ ಎಂದು ರಾಜಕೀಯ ಪಕ್ಷಗಳಿಗೆ ತಿಳಿದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಇತ್ತೀಚಿನ ಹೇಳಿಕೆಯನ್ನು ಆಯುಕ್ತರು ಉಲ್ಲೇಖಿಸಿದ್ದಾರೆ. ಸುಪ್ರೀಂ ಕೋರ್ಟ್ ವಿವಿ ಪ್ಯಾಟ್ ಮತ್ತು ಇವಿಎಂ ಬಳಸಿ ಚಲಾಯಿಸಿದ ಮತಗಳ ಸಂಪೂರ್ಣ ಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಶುಕ್ರವಾರ ವಜಾ ಮಾಡಿದೆ. ಜೊತೆಗೆ, ಮತಪತ್ರಗಳಿಗೆ ಹಿಂತಿರುಗುವುದಕ್ಕೆ ಸಮ್ಮತಿಸಿಲ್ಲ.
ʻಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಅಂದಾಜು 40 ಬಾರಿ ಇವಿಎಂಗಳನ್ನು ಪ್ರಶ್ನಿಸುವ ಅರ್ಜಿಗಳನ್ನು ತಿರಸ್ಕರಿಸಿವೆʼ ಎಂದು ಸಿಇಸಿ ಕುಮಾರ್ ಮಾರ್ಚ್ 16 ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವಾಗ ಹೇಳಿದ್ದರು. ʻಇವಿಎಂಗಳಿಂದಾಗಿ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ. ಹಲವು ಸಣ್ಣ ಪಕ್ಷಗಳು ಮತಯಂತ್ರದ ಯುಗದಲ್ಲಿ ಅಸ್ತಿತ್ವಕ್ಕೆ ಬರದೇ ಇರಬಹುದು. ಇವಿಎಂಗಳು ನ್ಯಾಯಯುತ ಮತ್ತು ರಾಜಕೀಯ ಪಕ್ಷಗಳು ಅದನ್ನು ಗುರುತಿಸಿವೆʼ ಎಂದು ಹೇಳಿದರು. ಅವು ʻಶೇ.100 ಸುರಕ್ಷಿತ, ಶೇ. 100 ಖಚಿತʼ ಎಂದು ವಿವರಿಸಿದರು.