ಜನಸಾಮಾನ್ಯರು, ರೈತರಿಗಾಗಿ ನನ್ನ ಆತ್ಮ ಅಶಾಂತವಾಗಿದೆ: ಶರದ್ ಪವಾರ್
x

ಜನಸಾಮಾನ್ಯರು, ರೈತರಿಗಾಗಿ ನನ್ನ ಆತ್ಮ ಅಶಾಂತವಾಗಿದೆ: ಶರದ್ ಪವಾರ್


ಏಪ್ರಿಲ್‌ 30- ʻನನ್ನ ಆತ್ಮವು ರೈತರು ಮತ್ತು ಸಾಮಾನ್ಯ ಜನರ ಉದ್ದೇಶಕ್ಕಾಗಿ ಅಶಾಂತವಾಗಿದೆ. ಅವರ ಅವಸ್ಥೆಯನ್ನು ಎತ್ತಿ ತೋರಿಸಲು 100 ಬಾರಿ ಅಶಾಂತವಾಗಿರಲು ಸಿದ್ಧವಿದ್ದೇನೆʼ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿದರು.

ʻಮಹಾರಾಷ್ಟ್ರದಲ್ಲಿ 'ಭಟಕ್ತಿ ಆತ್ಮ' (ಅಲೆದಾಡುವ ಆತ್ಮ)ವೊಂದು ಇದೆ. ಅದು ಯಶಸ್ಸು ಆಗದಿದ್ದರೆ, ಇತರರ ಒಳ್ಳೆಯ ಕೆಲಸವನ್ನು ಹಾಳು ಮಾಡುತ್ತದೆ. ಮಹಾರಾಷ್ಟ್ರ ಇದಕ್ಕೆ ಬಲಿಯಾಗಿದೆ,ʼ ಎಂದು ಮೋದಿ ಸೋಮವಾರ ಶರದ್ ಪವಾರ್ ಅವರ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದ್ದರು.

ಎನ್‌ಸಿಪಿ (ಎಸ್‌ಪಿ) ಶಿರೂರು ಲೋಕಸಭೆ ಅಭ್ಯರ್ಥಿ ಅಮೋಲ್ ಕೋಲ್ಹೆ ಅವರ ಜುನ್ನಾರ್ ತಹಸಿಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ʻನಿಮ್ಮ ಬೆರಳನ್ನು ಹಿಡಿದು ರಾಜಕೀಯಕ್ಕೆ ಬಂದಿದ್ದೇನೆʼ ಎಂಬ 2016ರ ಮೋದಿ ಅವರ ಹೇಳಿಕೆಯನ್ನು‌ ಸ್ಮರಿಸಿಕೊಂಡರು. ʻಮೋದಿ ತಡವಾಗಿ ನನ್ನ ಮೇಲೆ ಕೋಪಗೊಂಡಿದ್ದಾರೆʼ ಎಂದು ಹೇಳಿದರು.

ʻಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ಪುಣೆಯಲ್ಲಿ ಮಾಡಿದ ಭಾಷಣದಲ್ಲಿ ತಾವು ಪವಾರ್ ಸಾಹೇಬ್ ಅವರ ಬೆರಳು ಹಿಡಿದು ರಾಜಕೀಯಕ್ಕೆ ಬಂದಿದ್ಧೇನೆ ಎಂದು ಹೇಳಿದ್ದರು. ನಿನ್ನೆ ಅವರು ಕಳೆದ 45 ವರ್ಷಗಳಿಂದ ಮಹಾರಾಷ್ಟ್ರದ 'ಅಶಾಂತ' ಆತ್ಮವು ರಾಜ್ಯದಾ ದ್ಯಂತ ಪ್ರಕ್ಷುಬ್ಧತೆ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆʼ ಎಂದು ನೆನಪಿಸಿಕೊಂಡರು.

ʻಈ ಆತ್ಮ ಸರ್ಕಾರಕ್ಕೆ ಅಡೆತಡೆ ಸೃಷ್ಟಿಸುತ್ತಿದೆ ಎಂದು ಮೋದಿ ಹೇಳಿದ್ದರು. ಈ ಆತ್ಮದ ವಿರುದ್ಧ ರಕ್ಷಣೆಯ ಅಗತ್ಯದ ಬಗ್ಗೆಯೂ ಮಾತನಾಡಿದರು. ಮೋದಿಯವರ ಹೇಳಿಕೆಯನ್ನು ಓದಿದ್ದೇನೆ. ಆತ್ಮ ಅಶಾಂತವಾಗಿದೆ ಎಂಬುದು ಸರಿ. ಆದರೆ, ಸ್ವಯಂಗಾಗಿ ಅಲ್ಲ. ರೈತರು, ಹಣದುಬ್ಬರದಿಂದ ನರಳುತ್ತಿರುವ ಶ್ರೀಸಾಮಾನ್ಯನ ಸಂಕಷ್ಟದಿಂದ ಚಡಪಡಿಸುತ್ತಿದ್ದೇನೆʼ ಎಂದರು.

'ಶೆಹಜಾದಾ' ಹೇಳಿಕೆಗೆ ಕಿಡಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 'ಶೆಹಜಾದಾ' (ರಾಜಕುಮಾರ) ಎಂದು ಕರೆದಿದ್ದಕ್ಕೆ ಪ್ರಧಾನಿಯನ್ನು ಟೀಕಿಸಿದ ಪವಾರ್, ʻಅವರ ಕುಟುಂಬದ ಮೂರು ತಲೆಮಾರಿನವರು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಪ್ರಾಣ ತ್ಯಾಗ ಮಾಡಿದ್ದಾರೆʼ ಎಂದು ಹೇಳಿದರು.

ʻಜನಸಾಮಾನ್ಯರ ಕಷ್ಟಗಳು ಮತ್ತು ಇತರ ಸಮಸ್ಯೆಗಳನ್ನು ಪ್ರಸ್ತಾಪಿಸಬೇಕು ಎಂಬ ಮೌಲ್ಯಗಳನ್ನು ಯಶವಂತರಾವ್ ಚವಾಣ್ ಅವರಿಂದ ಅಳವಡಿಸಿಕೊಂಡಿದ್ದೇನೆ. ಈ ಮೌಲ್ಯಗಳಲ್ಲಿ ಯಾವುದೇ ರಾಜಿ ಇಲ್ಲ. 2014ರಲ್ಲಿ ಇಂಧನ ಮತ್ತು ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಸುವುದಾಗಿ ಭರವಸೆ ನೀಡಿದ್ದಿರಿ. ಈಗಿನ ಬೆಲೆಗಳನ್ನು ಪರಿಶೀಲಿಸಿ,ʼ ಎಂದು ಹೇಳಿದರು.

ʻಪವಾರ್ ಇಷ್ಟು ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂದು ಮೋದಿ ಕೇಳಿದರು. ಬದಲಿಗೆ, ಅವರು ಈ ಪ್ರಶ್ನೆಗೆ ಉತ್ತರಿಸಬೇಕು. ಏಕೆಂದರೆ ಅವರು ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಅವರು ಉತ್ತರಿಸುವುದಿಲ್ಲ. ಬದಲಾಗಿ ಇತರರನ್ನು ಟೀಕಿಸುತ್ತಾರೆ,ʼ ಎಂದರು.

ಹುದ್ದೆಯ ಘನತೆ ಎತ್ತಿ ಹಿಡಿಯಿರಿ: ʻಪ್ರಧಾನಿ ತಮ್ಮ ಹುದ್ದೆಯ ಘನತೆಯನ್ನು ಎತ್ತಿ ಹಿಡಿಯಬೇಕು. ಆ ಕುರ್ಚಿಯಲ್ಲಿ ಕುಳಿತವರು ಸುಳ್ಳು ಹರಡುತ್ತಿದ್ದರೆ, ಇಲ್ಲದ ತಪ್ಪುಗಳನ್ನು ಟೀಕಿಸಿದರೆ, ಅವರಿಂದ ಅಧಿಕಾರವನ್ನು ಕಿತ್ತುಕೊಳ್ಳಬೇಕಾಗುತ್ತದೆ,ʼ ಎಂದು ಹೇಳಿದರು.

Read More
Next Story