ಕೋವಿಡ್ ಪ್ರಮಾಣಪತ್ರದಿಂದ ಪ್ರಧಾನಿ ಫೋಟೋ ಕಾಣೆ; ಮಾದರಿ ಸಂಹಿತೆ  ಕಾರಣ ಎಂದ ಸರ್ಕಾರ
x

ಕೋವಿಡ್ ಪ್ರಮಾಣಪತ್ರದಿಂದ ಪ್ರಧಾನಿ ಫೋಟೋ ಕಾಣೆ; ಮಾದರಿ ಸಂಹಿತೆ ಕಾರಣ ಎಂದ ಸರ್ಕಾರ


ತಮ್ಮ ಕೋವಿನ್‌ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರ ಕಾಣೆಯಾಗಿದೆ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದು, ಮಾದರಿ ಸಂಹಿತೆ ಜಾರಿಯಲ್ಲಿರುವುದು ಇದಕ್ಕೆ ಕಾರಣ ಎಂದು ಸರ್ಕಾರ ಸ್ಪಷ್ಟೀಕರಣ ನೀಡಿದೆ.

ಕೋವಿಶೀಲ್ಡ್ ತಯಾರಕ ಅಸ್ಟ್ರಾಜೆನೆಕಾ, ಲಸಿಕೆ ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಂಬಂಧಿತ ಅಸ್ವಸ್ಥತೆಗೆ ಕಾರಣವಾಗಲಿದೆ ಎಂದು ಒಪ್ಪಿಕೊಂಡಿರುವುದರಿಂದ, ಛಾಯಾಚಿತ್ರ ತೆಗೆದುಹಾಕಲಾಗಿದೆ ಎಂದು ಹಲವರು ಹೇಳಿದರು. ಆದರೆ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವುದರಿಂದ ಪ್ರಧಾನಿಯವರ ಫೋಟೋ ತೆಗೆಯಲಾಗಿದೆ ಎಂದು ಸರ್ಕಾರ ಹೇಳಿದೆ.

ಎಕ್ಸ್‌ ನಲ್ಲಿ ಪೋಸ್ಟ್‌ ನಿಂದ ಆರಂಭ: ʻಕೋವಿಡ್‌ ಪ್ರಮಾಣಪತ್ರದಲ್ಲಿ ಮೋದಿಜಿ ಇನ್ನು ಮುಂದೆ ಕಾಣಿಸುವುದಿಲ್ಲ. ಪರಿಶೀಲಿಸಲು ಡೌನ್‌ ಲೋಡ್ ಮಾಡಿದೆ. ಹೌದು, ಅವರ ಫೋಟೋ ಇಲ್ಲʼ ಎಂದು ಸಂದೀಪ್ ಮನುಧಾನೆ ಎಂಬುವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಅವರ ಪೋಸ್ಟ್ ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ತಮ್ಮ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿಯವರ ಫೋಟೋ ಕಾಣೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅನೇಕ ಬಳಕೆದಾರರು ಪ್ರಧಾನಮಂತ್ರಿಯವರನ್ನು ಸಮರ್ಥಿಸಿಕೊಂಡರು ಮತ್ತು ಮನುಧನೆ ಅವರಿಗೆ ಮಾದರಿ ಸಂಹಿತೆ ಬಗ್ಗೆ ವಿವರಿಸಿದರು.

ʻಸರ್, ನೀವು ಜನರನ್ನು ದಾರಿ ತಪ್ಪಿಸಬಾರದು. ನಿಮ್ಮಅನುಮಾನ ಸರಿಯಲ್ಲ. ಮಾದರಿ ನೀತಿ ಸಂಹಿತೆ ಮತ್ತು ಚುನಾವಣೆ ಆಯೋಗದ ಮಾರ್ಗಸೂಚಿಯಿಂದಾಗಿ ಚುನಾವಣೆ ನಡೆಯುತ್ತಿರುವ ಎಲ್ಲ ರಾಜ್ಯಗಳಲ್ಲಿ ಫೋಟೋ ತೆಗೆದುಹಾಕಲಾಗಿದೆʼ, ಎಂದು ಅಜಯ್ ರೊಟ್ಟಿ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಲಸಿಕೆ ಪ್ರಮಾಣಪತ್ರದಿಂದ ಮೋದಿ ಅವರ ಫೋಟೋ ತೆಗೆದುಹಾಕಬೇಕು ಎಂಬ ಚುನಾವಣಾ ಆಯೋಗದ ಮಾರ್ಚ್ 2021ರ ಸ್ಕ್ರೀನ್‌ಶಾಟ್‌ ನ್ನು ಇನ್ನೊಬ್ಬರು ಹಂಚಿಕೊಂಡಿದ್ದಾರೆ.

2022 ರಲ್ಲಿ ಅಸೆಂಬ್ಲಿ ಚುನಾವಣೆಗೆ ಮಾದರಿ ನೀತಿ ಸಂಹಿತೆ ಆರಂಭವಾದಾಗ ಮೋದಿ ಅವರ ಫೋಟೋ ತೆಗೆದುಹಾಕಲಾಯಿತು.ಆದರೆ, ಐದು ರಾಜ್ಯಗಳಲ್ಲಿ ಬಳಕೆದಾರರಿಗೆ ನೀಡಲಾದ ಪ್ರಮಾಣಪತ್ರಗಳಲ್ಲಿ ಫೋಟೋ ಪ್ರಕಟಿಸಲು ಕೇಂದ್ರ ಆಲೋಚಿಸುತ್ತಿದೆ ಎಂದು ಮಾರ್ಚ್‌ನಲ್ಲಿ ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವಾಲಯ, ಲೋಕಸಭೆ ಚುನಾವಣೆಗಾಗಿ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಫೋಟೋ ತೆಗೆದುಹಾಕಲಾಗಿದೆ ಎಂದು ಸ್ಪಷ್ಟಪಡಿಸಿದೆ.

ವಿವಾದಾತ್ಮಕ ವಿಷಯ: 2021 ರಲ್ಲಿ ಪ್ರತಿಪಕ್ಷಗಳು ಮತ್ತು ಹಲವು ಬಳಕೆದಾರರು ವೈಯಕ್ತಿಕ ದಾಖಲೆಯಲ್ಲಿ ರಾಜಕೀಯ ನಾಯಕನ ಫೋಟೋ ಬಳಕೆಯನ್ನು ವಿರೋಧಿಸುವ ಮೂಲಕ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಬಳಕೆಯು ತಮ್ಮ ಮೂಲ ಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹಲವರು ಪ್ರತಿಭಟಿಸಿದ್ದರು.

ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಭಾವಚಿತ್ರವನ್ನು ತೆಗೆದುಹಾಕಬೇಕೆಂಬ ಅರ್ಜಿಯನ್ನು ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಅವರ ಪೀಠ ʻಪ್ರಚಾರ ಆಧರಿತ ದಾವೆʼ ಎಂದು ತಿರಸ್ಕರಿಸಿತ್ತು.

Read More
Next Story