ಆನೆ ದಾಳಿ: ಮಾತೃಭೂಮಿ ಕ್ಯಾಮರಾಮನ್ ಸಾವು
ಪಾಲಕ್ಕಾಡ್ (ಕೇರಳ), ಮೇ 8 - ಮಲಯಾಳಂನ ಪ್ರಮುಖ ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಬುಧವಾರ ಕಾಡಾನೆ ದಾಳಿಗೆ ಬುಧವಾರ ಬಲಿಯಾಗಿದ್ದಾರೆ.
ಮಾತೃಭೂಮಿ ನ್ಯೂಸ್‌ನಲ್ಲಿ ಕೆಲಸ ಮಾಡುತ್ತಿರುವ ಎ.ವಿ. ಮುಖೇಶ್ (34) ಮತ್ತು ವರದಿಗಾರ ದಾರಿ ತಪ್ಪಿದ ಆನೆ ಹಿಂಡಿನ ಚಲನವಲನದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾಗ, ಆನೆಗಳು ದಾಳಿ ನಡೆಸಿದವು ಎಂದು ಚಾನೆಲ್ ಮೂಲಗಳು ತಿಳಿಸಿವೆ. ಉತ್ತರ ಕೇರಳ ಜಿಲ್ಲೆಯ ಮಲಂಬುಳ ಮತ್ತು ಕಂಜಿಕೋಡ್ ನಡುವೆ ಇರುವ ಸ್ಥಳದಲ್ಲಿ ಆನೆಗಳು ನದಿಯನ್ನು ದಾಟುವ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ, ಈ ದುರಂತ ನಡೆಯಿತು. ಇದು ಆಗಾಗ ಕಾಡಾನೆಗಳ ಓಡಾಟಕ್ಕೆ ಸಾಕ್ಷಿಯಾಗುತ್ತಿರುವ ಪ್ರದೇಶ ಎಂದು ಸ್ಥಳೀಯರು ಹೇಳಿದರು.
ವರದಿಗಾರ ಮತ್ತು ವಾಹನದ ಚಾಲಕ ಸುರಕ್ಷಿತವಾಗಿ ಓಡಿಹೋದರೂ, ಮುಖೇಶ್ ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡರು. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಲಿಲ್ಲ.
ಹಿನ್ನೆಲೆ: ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ಮೂಲದ ಮುಖೇಶ್ ಅವರು ಕಳೆದ ಒಂದು ವರ್ಷದಿಂದ ಮಾತೃಭೂಮಿ ನ್ಯೂಸ್‌ನ ಪಾಲಕ್ಕಾಡ್ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಹಲವು ವರ್ಷಗಳಿಂದ ಚಾನೆಲ್‌ನ ನವದೆಹಲಿ ಬ್ಯೂರೋದ ಭಾಗವಾಗಿದ್ದರು. ಮಾತೃಭೂಮಿ ಆನ್‌ಲೈನ್‌ನಲ್ಲಿ ʻಅತಿಜೀವನಂʼ ಅಂಕಣದಲ್ಲಿ 100 ಕ್ಕೂ ಹೆಚ್ಚು ಲೇಖನ ಬರೆದಿದ್ದು, ವರದಿಗಾರಿಕೆಯಲ್ಲಿ ತಮ್ಮ ಕೌಶಲ ಸಾಬೀತುಪಡಿಸಿದ್ದರು.ಅಂಕಣವು ಅಂಚಿನಲ್ಲಿರುವ ಜನರ ಜೀವನವನ್ನು ಚಿತ್ರಿಸಿದ್ದಾರೆ. ಅವರ ಲೇಖನಗಳು ಅಧಿಕಾರಿಗಳು ಮತ್ತು ಸಾರ್ವಜನಿಕರ ಗಮನ ಸೆಳೆದು, ಬಡವರು ಮತ್ತು ಅಂಚಿನಲ್ಲಿರುವವರಿಗೆ ಸಹಾಯ ಮಾಡಿವೆ ಎಂದು ಅವರ ಸಹೋದ್ಯೋಗಿಗಳು ನೆನಪಿಸಿಕೊಂಡರು. ಮುಖೇಶ್ ಅವರು ತಮ್ಮ ಅಂಕಣದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳಿಗೆ ವೇತನದಿಂದ ಹಣ ನೀಡುವ ಮೂಲಕ ನೆರವು ನೀಡುತ್ತಿದ್ದರು ಎಂದು ಅವರು ಹೇಳಿದರು.
ಅವರು ಪತ್ನಿಯನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಸಚಿವರಾದ ಎ.ಕೆ.ಶಸೀಂದ್ರನ್, ಎಂ.ಬಿ.ರಾಜೇಶ್, ಸಾಜಿ ಚೆರಿಯನ್ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಜನರು ಸಂತಾಪ ಸೂಚಿಸಿದ್ದಾರೆ.