ಚುನಾವಣೆ 2024: ಹಂತ 2ರಲ್ಲಿ  ಶೇ.63.50 ಮತ ಚಲಾವಣೆ, ತ್ರಿಪುರಾ ಗರಿಷ್ಠ ಶೇ.79.58
x

ಚುನಾವಣೆ 2024: ಹಂತ 2ರಲ್ಲಿ ಶೇ.63.50 ಮತ ಚಲಾವಣೆ, ತ್ರಿಪುರಾ ಗರಿಷ್ಠ ಶೇ.79.58


13 ರಾಜ್ಯಗಳ 88 ಕ್ಷೇತ್ರಗಳನ್ನು ಒಳಗೊಂಡ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಶೇ. 63 ರಷ್ಟು ಮತದಾನವಾಗಿದೆ. ಕೆಲವು ರಾಜ್ಯಗಳಲ್ಲಿ ಇವಿಎಂ ದೋಷಗಳು ಮತ್ತು ನಕಲಿ ಮತದಾನದ ದೂರುಗಳು ಕೇಳಿಬಂದಿವೆ.

ಚುನಾವಣೆ ಆಯೋಗದ ಅಂಕಿಅಂಶಗಳ ಪ್ರಕಾರ, ತ್ರಿಪುರಾದಲ್ಲಿ ಗರಿಷ್ಠ ಶೇ.79.58ರಷ್ಟು ಮತದಾನವಾಗಿದೆ, ಮಣಿಪುರದಲ್ಲಿ ಶೇ.77.32, ಉತ್ತರ ಪ್ರದೇಶದಲ್ಲಿ ಶೇ. 54.85 ಮತ್ತು ಬಿಹಾರದಲ್ಲಿ ಶೇ.55.08 ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದ ಮಥುರಾ, ರಾಜಸ್ಥಾನದ ಬನ್ಸ್ವಾರಾ ಮತ್ತು ಮಹಾರಾಷ್ಟ್ರದ ಪರ್ಭಾನಿಯ ಕೆಲವು ಗ್ರಾಮಗಳಲ್ಲಿ ಮತದಾರರು ವಿವಿಧ ಕಾರಣ ನೀಡಿ ಮತ ಚಲಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಆದರೆ, ಹಕ್ಕು ಚಲಾಯಿಸಲು ಅಧಿಕಾರಿಗಳು ಅವರ ಮನವೊಲಿಸಿದರು.

ಏಳು ಹಂತದ ಚುನಾವಣೆಯ ಎರಡನೇ ಹಂತದ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಹಲವಾರು ರಾಜ್ಯಗಳು ತೀವ್ರ ಬಿಸಿಲಿನ ಪರಿಸ್ಥಿತಿ ಅನುಭವಿಸಿದವು. ಮೊದಲ ಹಂತದ ಮತದಾನ ಏಪ್ರಿಲ್ 19 ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ನಡೆದಿತ್ತು. ಮತ ಚಲಾವಣೆ ಬಹುತೇಕ ಶಾಂತಿಯುತವಾಗಿತ್ತು ಎಂದು ಆಯೋಗ ತಿಳಿಸಿದೆ. ಮತದಾನದ ತಾತ್ಕಾಲಿಕ ಅಂಕಿಅಂಶವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಸಿ ತಿಳಿಸಿದೆ.

ಕೇರಳದ ಎಲ್ಲ 20 ಸ್ಥಾನಗಳು, ಕರ್ನಾಟಕದ 28 ರಲ್ಲಿ 14, ರಾಜಸ್ಥಾನ 13, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ತಲಾ 8, ಮಧ್ಯಪ್ರದೇಶ 6, ಅಸ್ಸಾಂ ಮತ್ತು ಬಿಹಾರದಲ್ಲಿ ತಲಾ 5, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳ ತಲಾ 3 ಮತ್ತು ಮಣಿಪುರ, ತ್ರಿಪುರ ಹಾಗೂ ಜಮ್ಮು-ಕಾಶ್ಮೀರದಲ್ಲಿ ತಲಾ 1 ಸ್ಥಾನಕ್ಕೆ ಚುನಾವಣೆ ನಡೆದಿದೆ..

ಕಾಂಗ್ರೆಸ್ ನಾಯಕ ಶಶಿ ತರೂರ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ನಟ- ರಾಜಕಾರಣಿ ಅರುಣ್ ಗೋವಿಲ್, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ. ಕೆ. ಸುರೇಶ್ (ಕಾಂಗ್ರೆಸ್), ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ (ಜೆಡಿಎಸ್) ಪ್ರಮುಖ ಅಭ್ಯರ್ಥಿಗಳು. ಬಿಜೆಪಿಯ ಹೇಮಾ ಮಾಲಿನಿ. , ಓಂ ಬಿರ್ಲಾ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಹ್ಯಾಟ್ರಿಕ್ ಗೆಲುವು ಬಯಸುತ್ತಿದ್ದಾರೆ.

ಕೆಲವು ಬೂತ್‌ಗಳಲ್ಲಿ ನಕಲಿ ಮತದಾನ ಮತ್ತು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಸ್ಥಗಿತ ಪ್ರಕರಣಗಳು ನಡೆದಿವೆ. ಇಂತಹ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ವಿಳಂಬವಾಯಿತು.

ಪಾಲಕ್ಕಾಡ್, ಅಲಪ್ಪುಳ ಮತ್ತು ಮಲಪ್ಪುರಂನಲ್ಲಿ ಮತ ಚಲಾವಣೆ ನಂತರ ತಲಾ ಒಬ್ಬರು ಮತ್ತು ಕೋಯಿಕ್ಕೋಡ್‌ನ ಮತಗಟ್ಟೆಯೊಂದರಲ್ಲಿ ಪೋಲಿಂಗ್ ಏಜೆಂಟ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ತ್ರಿಪುರ ಪೂರ್ವ ಲೋಕಸಭೆ ಕ್ಷೇತ್ರದಲ್ಲಿ ಶೇ.78.48ರಷ್ಟು ಮತದಾನವಾಗಿದೆ. ಕೆಲವು ಬೂತ್‌ಗಳಿಂದ ದೂರುಗಳು ಬಂದಿದ್ದು, ತಕ್ಷಣವೇ ಪರಿಹರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದರು. ಮಹಾರಾಷ್ಟ್ರದ ಎಂಟು ಕ್ಷೇತ್ರಗಳಲ್ಲಿ ಶೇ.53.84, ರಾಜಸ್ಥಾನದಲ್ಲಿ ಶೇ.62.46ರಷ್ಟು ಮತದಾನವಾಗಿದೆ. ರಾಜಸ್ಥಾನದ ಬಾರ್ಮರ್-ಜೈಸಲ್ಮೇರ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರ ನಡುವೆ ಘರ್ಷಣೆ ವರದಿಯಾಗಿವೆ. ಬನ್ಸ್ವಾರಾ ಜಿಲ್ಲೆಯ ಬಗಿದೊರಾ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿದ್ದು, ಶೇ.73.25ರಷ್ಟು ಮತದಾನವಾಗಿದೆ.

ಉತ್ತರ ಪ್ರದೇಶದ ಎಂಟು ಲೋಕಸಭೆ ಕ್ಷೇತ್ರಗಳಲ್ಲಿ ಶೇ.53.71ರಷ್ಟು ಮತದಾನವಾಗಿದೆ. ನೋಯಿಡಾದ ಕೆಲವು ನಿವಾಸಿಗಳ ಕ್ಷೇಮಾ ಭಿವೃದ್ಧಿ ಸಂಘಗಳು ಮತದಾರರನ್ನು ಮತಗಟ್ಟೆಗಳಿಗೆ ಕರೆತರಲು ಎಲೆಕ್ಟ್ರಿಕ್ ವಾಹನದ ವ್ಯವಸ್ಥೆ ಮಾಡಿದ್ದವು. ಬಿಹಾರದಲ್ಲಿ ಶೇ.54.91, ಪಶ್ಚಿಮ ಬಂಗಾಳದಲ್ಲಿ ಶೇ.71.84 ಮತ್ತು ಜಮ್ಮು-ಕಾಶ್ಮೀರದಲ್ಲಿ ಶೇ.71.21 ಮತದಾನವಾಗಿದೆ. 2019 ರ ಆಗಸ್ಟ್ 5 ರಂದು ವಿಧಿ 370 ರದ್ದುಗೊಳಿಸಿದ ಮತ್ತು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ನಡೆದ ಮೊದಲ ಲೋಕಸಭೆ ಚುನಾವಣೆ ಇದಾಗಿದೆ.

ಚುನಾವಣೆ ಆಯೋಗವು ಪಶ್ಚಿಮ ಬಂಗಾಳದಲ್ಲಿ ಸುಮಾರು 300 ದೂರುಗಳನ್ನು ದಾಖಲಿಸಿದ್ದು, ಬಹುತೇಕವು ಇವಿಎಂ ಅಸಮರ್ಪಕ ಕಾರ್ಯಕ್ಕೆ ಸಂಬಂಧಿಸಿದೆ.

ಶುಕ್ರವಾರದ ಹಂತದ ನಂತರ ಕೇರಳ, ರಾಜಸ್ಥಾನ ಮತ್ತು ತ್ರಿಪುರಾದಲ್ಲಿ ಮತದಾನ ಮುಗಿದಿದೆ. ಏಪ್ರಿಲ್ 19 ರಂದು ಮೊದಲ ಹಂತದಲ್ಲಿ, ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1) ದ ಎಲ್ಲ ಸ್ಥಾನಗಳಲ್ಲಿ ಮತದಾನ ಪೂರ್ಣಗೊಂಡಿತು.

ಶೇ.63 ಮತಚಲಾವಣೆ: ಎರಡನೇ ಹಂತದಲ್ಲಿ ಸರಾಸರಿ ಶೇ. 63 ರಷ್ಟು ಮತದಾನವಾಗಿದೆ. ರಾಜ್ಯವಾರು ವಿಭಜನೆ ಇಲ್ಲಿದೆ: ತ್ರಿಪುರ: 79.58, ಮಣಿಪುರ: 77.95, ಅಸ್ಸಾಂ: 75.35, ಛತ್ತೀಸ್‌ಗಢ: 73.94, ಜಮ್ಮು ಮತ್ತು ಕಾಶ್ಮೀರ: 72. 32, ಪಶ್ಚಿಮ ಬಂಗಾಳ: 71.84, ಕೇರಳ: 70.35, ಕರ್ನಾಟಕ: 68.38, ರಾಜಸ್ಥಾನ: 64.07, ಮಹಾರಾಷ್ಟ್ರ 59.49, ಮಧ್ಯಪ್ರದೇಶ: 58.13, ಬಿಹಾರ: 55.99, ಉತ್ತರ ಪ್ರದೇಶ: 54.85.

Read More
Next Story