Election 2024: ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಹೋರಾಟ: ರಾಹುಲ್
ಏಪ್ರಿಲ್ 15- ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆ ಪ್ರಚಾರದ ಭಾಗವಾಗಿ ಸೋಮವಾರ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ತಮಿಳುನಾಡಿನ ಗಡಿಭಾಗದ ನೀಲಗಿರಿ ಜಿಲ್ಲೆಗೆ ಆಗಮಿಸಿದ ರಾಹುಲ್, ಅಲ್ಲಿನ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಆನಂತರ ರಸ್ತೆ ಮಾರ್ಗವಾಗಿ ಕೇರಳದ ಸುಲ್ತಾನ್ ಬತ್ತೇರಿ ತಲುಪಿದರು. ಸುಲ್ತಾನ್ ಬತ್ತೇರಿಯಲ್ಲಿ ತೆರೆದ ಛಾವಣಿಯ ಕಾರಿನ ಮೇಲೆ ಕುಳಿತು ರಾಹುಲ್ ಪ್ರಯಾಣಿಸಿದರು. ಅವರ ಫೋಟೋ ಇರುವ ಫಲಕಗಳನ್ನು ಹಿಡಿದು ನೂರಾರು ಕಾರ್ಯಕರ್ತರು ಅವರ ಪಕ್ಕದಲ್ಲಿ ಜಮಾಯಿಸಿದರು.
ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಹೋರಾಟ: ʻಇಂದು ಮುಖ್ಯ ಹೋರಾಟ ಇರುವುದು ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧʼ ಎಂದು ಹೇಳಿದರು.
ʻಜನರ ಮೇಲೆ ಭಾಷೆಯನ್ನು ಹೇರಲು ಸಾಧ್ಯವಿಲ್ಲ. ಒಂದು ರಾಷ್ಟ್ರ, ಒಂದು ಭಾಷೆ, ಒಬ್ಬ ನಾಯಕ ಎಂದು ಬಿಜೆಪಿ ಮತ್ತು ಪ್ರಧಾನಿ ಹೇಳುತ್ತಾರೆ. ಭಾಷೆ ಮೇಲಿನಿಂದ ಹೇರುವ ವಿಷಯವಲ್ಲ. ಭಾಷೆ ವ್ಯಕ್ತಿಯ ಒಳಗಿನಿಂದ, ಹೃದಯದಿಂದ ಬರುವ ಸಂಗತಿ. ದೇಶಕ್ಕೊಬ್ಬನೇ ನಾಯಕ ಇರಬೇಕು ಎಂಬ ಕಲ್ಪನೆ ಭಾರತೀಯರಿಗೆ ಮಾಡಿದ ಅವಮಾನ,ʼ ಎಂದು ಹೇಳಿದರು.
ʼಕೇರಳದ ವ್ಯಕ್ತಿಗೆ ನಿಮ್ಮ ಭಾಷೆ ಹಿಂದಿಗಿಂತ ಕೀಳು ಎಂದು ಹೇಳುವುದು ಕೇರಳೀಯರಿಗೆ ಮಾಡಿದ ಅವಮಾನ. ದೇಶಕ್ಕೆ ಒಬ್ಬನೇ ನಾಯಕ ಇರಬೇಕು ಎಂಬ ಈ ಕಲ್ಪನೆ ಪ್ರತಿಯೊಬ್ಬ ಯುವ ಭಾರತೀಯನಿಗೆ ಮಾಡಿದ ಅವಮಾನʼ ಎಂದು ಹೇಳಿದರು.
ಎರಡನೇ ಭೇಟಿ: ವಯನಾಡಿನಿಂದ ಮತ್ತೆ ಸ್ಪರ್ಧಿಸಿರುವ ರಾಹುಲ್, ಎರಡನೇ ಬಾರಿ ಕ್ಷೇತ್ರಕ್ಕೆ ಬಂದಿದ್ದಾರೆ. ಏಪ್ರಿಲ್ ಆರಂಭದಲ್ಲಿ ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿ, ಬೃಹತ್ ರೋಡ್ ಶೋ ನಡೆಸಿದ್ದರು. 2019 ರ ಚುನಾವಣೆಯಲ್ಲಿ ಅವರು ವಯನಾಡ್‌ನಿಂದ 4,31,770 ಮತಗಳ ದಾಖಲೆ ಅಂತರದಿಂದ ಗೆದ್ದಿದ್ದಾರೆ.
ಕೇರಳದ 20 ಲೋಕಸಭೆ ಸ್ಥಾನಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.