
ಚುನಾವಣೆ 2024-ಕಾಂಗ್ರೆಸ್‌ನ ಪುರಿ ಅಭ್ಯರ್ಥಿ ಸ್ಪರ್ಧೆಗೆ ನಿರಾಕರಣೆ
ಪುರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತ ಮೊಹಂತಿ ಅವರು ಹಣದ ಕೊರತೆಯಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದು, ಪಕ್ಷದ ಟಿಕೆಟ್ ಹಿಂದಿರುಗಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಬ್ರಜಮೋಹನ್ ಮೊಹಂತಿ ಅವರ ಪುತ್ರಿ ಸುಚರಿತ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾ ಲ್ ಅವರಿಗೆ ಕಳಿಸಿದ ಇಮೇಲ್‌ನಲ್ಲಿ ಪಕ್ಷ ಪ್ರಚಾರಕ್ಕೆ ಹಣ ನಿರಾಕರಿಸಿರುವುದರಿಂದ, ಭಾರಿ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ. ಎಐಸಿಸಿ ಒಡಿಶಾ ಉಸ್ತುವಾರಿ ಅಜೋಯ್ ಕುಮಾರ್ ಅವರು, ʻನಿಮ್ಮ ಸ್ವಂತ ಸಂಪನ್ಮೂಲದಿಂದ ಹೋರಾಡುವಂತೆ ಕೇಳಿಕೊಂಡಿದ್ದಾರೆʼ ಎಂದು ಪತ್ರಕರ್ತೆ-ರಾಜಕಾರಣಿ ಆರೋಪಿಸಿದ್ದಾರೆ.
ಕ್ರೌಡ್ ಫಂಡಿಂಗ್ ಯತ್ನ ವಿಫಲ: ʻನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ವೇತನ ಪಡೆಯುತ್ತಿದ್ದ ವೃತ್ತಿಪರ ಪತ್ರಕರ್ತಳಾಗಿದ್ದೆ. ಪುರಿಯಲ್ಲಿ ಪ್ರಚಾರಕ್ಕೆ ನನ್ನ ಬಳಿ ಇದ್ದ ಎಲ್ಲವನ್ನೂ ನೀಡಿದ್ದೇನೆ. ನಾನು ಆರಂಭಿಸಿದ ಸಾರ್ವಜನಿಕ ದೇಣಿಗೆ ಅಭಿಯಾನ ಹೆಚ್ಚು ಯಶಸ್ವಿಯಾಗಲಿಲ್ಲ. ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ಪ್ರಯತ್ನಿಸಿದೆ,ʼ ಎಂದು ಅವರು ಮೇಲ್‌ನಲ್ಲಿ ತಿಳಿಸಿದ್ದಾರೆ.
ಸುಚರಿತ ಅವರು ಕ್ರೌಡ್ ಫಂಡಿಂಗ್‌ಗೆ ಮುಂದಾಗಿ, ಏಪ್ರಿಲ್ 29 ರಂದು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ದೇಣಿಗೆಗಾಗಿ ಮನವಿ ಮಾಡಿದರು.ʻಬಿಜೆಪಿ ಸರ್ಕಾರ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಮತ್ತು ಚುನಾವಣೆಯಲ್ಲಿ ಗೆಲ್ಲಲು ಪ್ರಜಾಸತ್ತಾತ್ಮಕವಲ್ಲದ ಕ್ರಮಕ್ಕೆ ಮುಂದಾಗಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಖಾತೆಗಳನ್ನು ತಡೆಹಿಡಿಯುವ ಮೂಲಕ ಉಸಿರುಗಟ್ಟಿಸಲು ಪ್ರಯತ್ನಿಸಿದೆʼ ಎಂದು ಹೇಳಿ, ನಾಗರಿಕರಿಂದ ದೇಣಿಗೆ ಕೋರಿದ್ದರು. ಆದರೆ, ಅವರ ಪ್ರಯತ್ನಕ್ಕ ಜನ ಸ್ಪಂದಿಸಲಿಲ್ಲ.ಆನಂತರ ಅವರು ನಿಧಿಗಾಗಿ ಪಕ್ಷದ ಕೇಂದ್ರ ನಾಯಕತ್ವ ಸೇರಿದಂತೆ ಹಿರಿಯ ನಾಯಕರನ್ನು ಸಂಪರ್ಕಿಸಿದರು. ʻನಿಧಿಯಿಲ್ಲದೆ ಪ್ರಚಾರ ನಡೆಸಲು ಸಾಧ್ಯವಿಲ್ಲ.ಹಾಗಾಗಿ, ಪಕ್ಷದ ಟಿಕೆಟ್ ಅನ್ನು ಹಿಂದಿರುಗಿಸುತ್ತೇನೆʼ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ, ಬಿಜೆಡಿ ಅಭ್ಯರ್ಥಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಅರುಪ್ ಪಟ್ನಾಯಕ್ ವಿರುದ್ಧ ಸುಚರಿತ ಅವರನ್ನು ಕಣಕ್ಕಿಳಿಸಲಾಗಿತ್ತು. ಪುರಿ ಲೋಕಸಭೆ ಕ್ಷೇತ್ರಕ್ಕೆ ಮೇ 25 ರಂದು ಮತದಾನ ನಡೆಯಲಿದೆ.