ಚುನಾವಣೆ-2024: 11 ಗಂಟೆಯವರೆಗೆ 25.41% ಮತದಾನ
x

ಚುನಾವಣೆ-2024: 11 ಗಂಟೆಯವರೆಗೆ 25.41% ಮತದಾನ


ಮೇ 7 -ಲೋಕಸಭೆ ಚುನಾವಣೆಯ ಮೂರನೇ ಹಂತದಲ್ಲಿ ಮೊದಲ ನಾಲ್ಕು ಗಂಟೆಗಳಲ್ಲಿ ಅಂದಾಜು ಶೇ. 25.41 ರಷ್ಟು ಮಂದಿ ಮತ ಚಲಾವಣೆ ಮಾಡಿದ್ದಾರೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತ ಚಲಾವಣೆ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ನಡೆಯಲಿದೆ.

ಚುನಾವಣಾ ಆಯೋಗದ ಪ್ರಕಾರ, ಮಹಾರಾಷ್ಟ್ರದಲ್ಲಿ ಕಡಿಮೆ ಮತದಾನ ಶೇ. 18.18 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ.32.82 ರಷ್ಟು ಅಧಿಕ ಮತದಾನ ಆಗಿದೆ.

ಆರಂಭಿಕ ಮತದಾರರಲ್ಲಿ ಮೋದಿ-ಶಾ: ಪ್ರಧಾನಿ ಮೋದಿ ಅವರು ಅಹಮದಾಬಾದ್ ನಗರದ ರಾನಿಪ್ ಪ್ರದೇಶದ ನಿಶಾನ್ ಪಬ್ಲಿಕ್ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಅವರು ಮತಗಟ್ಟೆಗೆ ಆಗಮಿಸಿದಾಗ, ಗಾಂಧಿನಗರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕೇಂದ್ರ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಉಪಸ್ಥಿತರಿದ್ದರು. ಶಾ ಆನಂತರ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಪತ್ನಿ ಸೋನಾಲ್ ಶಾ, ಪುತ್ರ ಜಯ್ ಶಾ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ಮತ ಚಲಾಯಿಸಿದರು.

ಪ್ರಮುಖ ಆರಂಭಿಕ ಮತದಾರರು: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಭಗವಂತ ಖೂಬಾ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕದಲ್ಲಿ ಆರಂಭಿಕ ಮತ ಚಲಾವಣೆ ಮಾಡಿದವರಲ್ಲಿ ಸೇರಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರರಾದ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸೊಸೆಯಂದಿರು ಮತ ಚಲಾಯಿಸಿದರು. ಮಹಾರಾಷ್ಟ್ರದಲ್ಲಿ, ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಬಾರಾಮತಿ ಲೋಕಸಭೆ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿಯಾದ ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ ಚಲಾಯಿಸಿದವರಲ್ಲಿ ಸೇರಿದ್ದಾರೆ.

ಮೂರನೇ ಹಂತ: ಮೂರನೇ ಹಂತದಲ್ಲಿ120 ಮಹಿಳೆಯರು ಸೇರಿದಂತೆ 1,300 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಮುಖರೆಂದರೆ, ಕೇಂದ್ರ ಸಚಿವರಾದ ಅಮಿತ್ ಶಾ (ಗಾಂಧಿನಗರ), ಜ್ಯೋತಿರಾದಿತ್ಯ ಸಿಂಧಿಯಾ (ಗುಣ), ಮನ್ಸುಖ್ ಮಾಂಡವಿಯ (ಪೋರಬಂದರ್), ಪುರುಷೋತ್ತಮ ರೂಪಾಲಾ (ರಾಜಕೋಟ್), ಪ್ರಲ್ಹಾದ್ ಜೋಶಿ (ಧಾರವಾಡ), ಮತ್ತು ಸತ್ಯಪಾಲ್‌ ಸಿಂಗ್‌ ಬಘೇಲ್ (ಆಗ್ರಾ) ಸೇರಿದ್ದಾರೆ. 8.39 ಕೋಟಿ ಮಹಿಳೆಯರು ಸೇರಿದಂತೆ 17.24 ಕೋಟಿ ಜನ ಮತದಾನಕ್ಕೆ ಅರ್ಹರಾಗಿದ್ದು, 18.5 ಲಕ್ಷ ಅಧಿಕಾರಿಗಳಿರುವ 1.85 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಹಾರಾಷ್ಟ್ರದ 11, ಉತ್ತರ ಪ್ರದೇಶ 10, ಕರ್ನಾಟಕ 14, ಛತ್ತೀಸ್‌ಗಢ 7, ಬಿಹಾರ 5, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ತಲಾ 4, ಗೋವಾದ ಎಲ್ಲ ಎರಡು ಕ್ಷೇತ್ರ, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ-ನಗರ ಹವೇಲಿ ಮತ್ತು ದಮನ್-ದಿಯು (2 ಸ್ಥಾನ) ಮತ್ತು ಮಧ್ಯಪ್ರದೇಶದ ಒಂಬತ್ತು ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

Read More
Next Story