ಸಿಎಂ ಮತ್ತು ಪುತ್ರಿ  ವಿರುದ್ಧ ಹೋರಾಟ ಮುಂದುವರಿಕೆ: ಕುಜಲನಾದನ್
x

ಸಿಎಂ ಮತ್ತು ಪುತ್ರಿ ವಿರುದ್ಧ ಹೋರಾಟ ಮುಂದುವರಿಕೆ: ಕುಜಲನಾದನ್


ತಿರುವನಂತಪುರಂ, ಮೇ 7: ಖಾಸಗಿ ಗಣಿ ಕಂಪನಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಅವರ ಐಟಿ ಸಂಸ್ಥೆ ನಡುವಿನ ಹಣಕಾಸು ವಹಿವಾಟಿನಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಜಲನಾದನ್ ಮಂಗಳವಾರ ಹೇಳಿದ್ದಾರೆ.

ವಿಜಯನ್ ವಿರುದ್ಧ ತನಿಖೆ ಕೋರಿ ಅವರು ಸಲ್ಲಿಸಿದ ಮನವಿಯನ್ನು ವಿಚಕ್ಷಣ ನ್ಯಾಯಾಲಯ ತಿರಸ್ಕರಿಸಿದ ಒಂದು ದಿನದ ನಂತರ ಈ ಹೇಳಿಕೆ ಹೊರಬಿದ್ದಿದೆ.

ʻಕುಜಲನಾದನ್ ಅವರ ಆರೋಪಗಳು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರನ್ನು ಹಿಂದೆ ಸರಿಸುವ ಗುರಿ ಹೊಂದಿವೆ. ನ್ಯಾಯಾಲಯದ ಆದೇಶದಿಂದ ಅವರ ಪ್ರಯತ್ನ ವಿಫಲವಾಗಿದೆ. ಅವರು ರಾಜೀನಾಮೆ ನೀಡಬೇಕು ಎಂದು ಎಲ್‌ಡಿಎಫ್ ಸಂಚಾಲಕ ಇ.ಪಿ. ಜಯರಾಜನ್ ಅವರು ಹೇಳಿದ್ದಾರೆ.

ʻನ್ಯಾಯಾಲಯದ ತೀರ್ಪಿನಿಂದ ತಮ್ಮ ವಿಶ್ವಾಸಕ್ಕೆ ಧಕ್ಕೆಯಾಗಿಲ್ಲ. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇನೆ. ಇದು ಸಿಎಂ ಅವರನ್ನು ಶಿಕ್ಷಿಸಬೇಕೆಂಬ ಮನವಿಯಲ್ಲ; ಬದಲಿಗೆ ಅವರ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿದ ಅರ್ಜಿʼ ಎಂದು ಕುಜಲನಾದನ್‌ ಹೇಳಿದ್ದಾರೆ.

ʻವಿಜಯನ್ ಅವರು ಗಣಿ ಕಂಪನಿಯಿಂದ ಹಣ ಪಡೆದಿದ್ದಾರೆ ಎಂದು ತಾನು ಆಪಾದಿಸಿಲ್ಲ. ಏಕೆಂದರೆ, ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅದಕ್ಕೆ ಸಂಬಂಧಿಸಿದ ಡೈರಿ ನಮೂದುಗಳನ್ನು ಸಾಕ್ಷ್ಯವಾಗಿ ಬಳಸಲಾಗುವುದಿಲ್ಲ. ಆದರೆ, ಟಿ. ವೀಣಾ ಮತ್ತು ಅವರ ಕಂಪನಿ ಹಣ ಸ್ವೀಕರಿಸಿದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲʼ ಎಂದು ಅವರು ಹೇಳಿದರು.

ಭ್ರಷ್ಟಾಚಾರವನ್ನು ಸಾಬೀತುಪಡಿಸುವ ಅಂಶಗಳು ಅದರಲ್ಲಿ ಇಲ್ಲ ಎಂದು ಕುಜಲನಾದನ್ ಅವರ ಮನವಿಯನ್ನು ವಿಚಕ್ಷಣ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.

Read More
Next Story