ಚುನಾವಣೆ ಮತ ಚಲಾವಣೆ ದತ್ತಾಂಶದಲ್ಲಿ ವ್ಯತ್ಯಾಸ: ಇಂಡಿಯ ಒಕ್ಕೂಟದ ಸದಸ್ಯರಿಗೆ ಖರ್ಗೆ ಪತ್ರ
ಮೇ 7-ಚುನಾವಣೆ ಆಯೋಗ ಬಿಡುಗಡೆ ಮಾಡಿರುವ ಮತ ಚಲಾವಣೆ ದತ್ತಾಂಶದಲ್ಲಿನ ವ್ಯತ್ಯಾಸಕ್ಕೆ ಆಯೋಗವನ್ನು ಹೊಣೆಗಾರನಾಗಿ ಮಾಡಬೇಕೆಂದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯ ಒಕ್ಕೂಟದ ವಿವಿಧ ಪಕ್ಷಗಳ ನಾಯಕರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನದನ್ನು ರಕ್ಷಿಸುವುದು ನಮ್ಮ ಏಕೈಕ ಉದ್ದೇಶವಾಗಿರುವುದರಿಂದ, ಇಂತಹ ವ್ಯತ್ಯಾಸ ಕುರಿತು ಧ್ವನಿ ಎತ್ತಬೇಕು. ಚುನಾವಣೆ ಆಯೋಗದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳೋಣ ಮತ್ತು ಅದನ್ನು ಹೊಣೆಗಾರರನ್ನಾಗಿ ಮಾಡೋಣ ಎಂದು ಪತ್ರದಲ್ಲಿ ಖರ್ಗೆ ಒತ್ತಾಯಿಸಿದ್ದಾರೆ.
ʻಪ್ರಜಾಪ್ರಭುತ್ವದ ರಕ್ಷಣೆ ಮತ್ತು ಚುನಾವಣೆ ಆಯೋಗದ ಸ್ವತಂತ್ರ ಕಾರ್ಯನಿರ್ವಹಣೆಯ ರಕ್ಷಣೆ ನಮ್ಮ ಸಾಮೂಹಿಕ ಪ್ರಯತ್ನ ಆಗಿರ ಬೇಕು. ಅಂತಿಮ ಫಲಿತಾಂಶವನ್ನು ತಿದ್ದುವ ಪ್ರಯತ್ನ ಇದಾಗಿರಬಹುದೇ? ಎಂಬ ಪ್ರಶ್ನೆಯನ್ನು ಕೇಳಬೇಕಾಗುತ್ತದೆ,ʼ ಎಂದು ಕೇಳಿದರು.
ಬಿಜೆಪಿ ಕುಸಿಯುತ್ತಿದೆ: ʻಮೊದಲ ಎರಡು ಹಂತಗಳಲ್ಲಿನ ಮತದಾನದ ಪ್ರವೃತ್ತಿಯನ್ನು ನೋಡಿ, ಪ್ರಧಾನಿ ಮತ್ತು ಬಿಜೆಪಿ ಕಂಗೆಟ್ಟಿದೆ ಮತ್ತು ಹತಾಶರಾಗಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಿರಂಕುಶಾಧಿಕಾರ ನಿರ್ಗಮಿಸುತ್ತಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಸಾಮೂಹಿಕವಾಗಿ ಒಗ್ಗಟ್ಟಿನಿಂದ ಮತ್ತು ನಿಸ್ಸಂದಿಗ್ಧವಾಗಿ ಇಂತಹ ವ್ಯತ್ಯಯಗಳ ವಿರುದ್ಧ ಧ್ವನಿ ಎತ್ತಬೇಕೆಂದು ಒತ್ತಾಯಿಸುತ್ತೇನೆ. ಏಕೆಂದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ನಮ್ಮ ಏಕೈಕ ಉದ್ದೇಶ,ʼ ಎಂದು ಹೇಳಿದ್ದಾರೆ. ಪತ್ರವನ್ನು ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಅಂಕಿಅಂಶ ಬಿಡುಗಡೆಯಲ್ಲಿ ವಿಳಂಬ: ಚುನಾವಣೆ ಆಯೋಗವು ಮತದಾನ ಅಂಕಿಅಂಶಗಳನ್ನು ಬಿಡುಗಡೆ ಮಾಡುವಲ್ಲಿನ ವಿಳಂಬವನ್ನು ಹಲವು ವಿರೋಧ ಪಕ್ಷಗಳು ಪ್ರಶ್ನೆ ಮಾಡಿವೆ.