ರಾಹುಲ್ ಗಾಂಧಿ ಡಿಎನ್‌ಎ ಪರೀಕ್ಷೆ ಹೇಳಿಕೆ: ವಿವಾದ ಸೃಷ್ಟಿಸಿದ ಎಲ್‌ಡಿಎಫ್ ಶಾಸಕ
ಏಪ್ರಿಲ್ 23- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಡಿಎನ್‌ಎ ಪರೀಕ್ಷಿಸುವ ಅಗತ್ಯವಿದೆ ಎಂದು ಹೇಳಿಕೆ ನೀಡಿರುವ ಎಲ್‌ಡಿಎಫ್ ಶಾಸಕ ಪಿ.ವಿ. ಅನ್ವರ್, ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಎಡತನಟ್ಟುಕರದಲ್ಲಿ ಎಲ್‌ಡಿಎಫ್ ಸ್ಥಳೀಯ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಶಾಸಕ-ಉದ್ಯಮಿ, ʻರಾಹುಲ್ ಗಾಂಧಿ ಅವರು ಗಾಂಧಿ ಎಂಬ ಉಪನಾಮದಿಂದ ಕರೆಯಲು ಅರ್ಹರಲ್ಲದ ನಾಲ್ಕನೇ ದರ್ಜೆಯ ಪ್ರಜೆʼ ಎಂದು ಟೀಕಿಸಿದರು. ಇತ್ತೀಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ರಾಹುಲ್ ಮಾಡಿರುವ ಟೀಕೆಗಳಿಂದ ಕೆರಳಿರುವ ಅನ್ವರ್, ʻನೆಹರೂ ಕುಟುಂಬದ ವ್ಯಕ್ತಿಯೊಬ್ಬರು ಈ ರೀತಿ ಹೇಳಿಕೆ ನೀಡುವುದು ಹೇಗೆ ಸಾಧ್ಯ?ʼ ಎಂದು ಪ್ರಶ್ನಿಸಿದರು. ʻರಾಹುಲ್ ಗಾಂಧಿ ಅವರ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂಬುದು ನನ್ನ ಅಭಿಪ್ರಾಯʼ ಎಂದು ಅನ್ವರ್ ಹೇಳಿದರು.
ಎಡಪಂಥೀಯರ ವಿರುದ್ಧ ಹಲವು ಆರೋಪ ಕೇಳಿಬಂದಿದ್ದರೂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೇಂದ್ರ ಏಜೆನ್ಸಿಗಳು ವಿಚಾರಣೆ ಮತ್ತು ಬಂಧನದಿಂದ ಏಕೆ ವಿನಾಯಿತಿ ನೀಡಿವೆ ಎಂದು ಇತ್ತೀಚಿನ ಚುನಾವಣೆ ಪ್ರಚಾರದ ವೇಳೆ ರಾಹುಲ್ ಪ್ರಶ್ನಿಸಿದ್ದರು.
ಎಡ ಪಕ್ಷಗಳ ಟೀಕೆ: ಕಾಂಗ್ರೆಸ್ ನಾಯಕರು ವಿಜಯನ್ ಬದಲು ಮೋದಿ ಮತ್ತು ಆರ್‌ಎಸ್ಎಸ್ ಅನ್ನು ಟೀಕಿಸಬೇಕು ಎಂದು ಎಡ ಪಕ್ಷಗಳ ನಾಯಕರು ಪ್ರತಿಕ್ರಿಯಿಸಿದ್ದಾರೆ. ರಾಹುಲ್ ವಿರುದ್ಧ ಅನ್ವರ್ ಅವರ ಆಕ್ಷೇಪಾರ್ಹ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ಎಲ್‌ಡಿಎಫ್ ಶಾಸಕರನ್ನು ಸಮರ್ಥಿಸಿಕೊಂಡಿದ್ದಾರೆ. ʻರಾಹುಲ್ ಗಾಂಧಿ ಅವರ ಮಾತಿಗೆ ಉತ್ತರ ಸಿಕ್ಕಿದೆ. ಅವರು ಟೀಕೆಗಳನ್ನು ಮೀರಿದ ವ್ಯಕ್ತಿಯೇನಲ್ಲʼ ಎಂದು ವಿಜಯನ್ ಕಣ್ಣೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಚುನಾವಣೆ ಆಯೋಗಕ್ಕೆ ದೂರು: ಅನ್ವರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ʻಈ ಬಗ್ಗೆ ಆಯೋಗ ತುರ್ತು ಕ್ರಮ ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿ ಮತ್ತು ನೆಹರು ಕುಟುಂಬಕ್ಕೆ ಅವಮಾನ ಮಾಡಿರುವ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು. ಅನ್ವರ್ ಮೂಲಕ ಇಂಥ ಹೇಳಿಕೆ ನೀಡುತ್ತಿರುವುದು ಮುಖ್ಯಮಂತ್ರಿ ʼ ಎಂದು ಕೆಪಿಸಿಸಿ ಹಂಗಾಮಿ ಅಧ್ಯಕ್ಷ ಎಂ.ಎಂ.ಹಸನ್ ಆಗ್ರಹಿಸಿದರು.
ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ರಾಹುಲ್ ವಿರುದ್ಧದ ಅವಮಾನಕರ ಹೇಳಿಕೆಗಳ ವಿರುದ್ಧ ಹರಿಹಾಯ್ದರು. ನೆಹರು ಕುಟುಂಬವನ್ನು ಅವಮಾನಿಸಲು ಸಿಪಿಐ (ಎಂ) ನಿಲಂಬೂರಿನ ಶಾಸಕರಿಗೆ ʻಕೊಟೇಶನ್ʼ ನೀಡಿದೆ ಎಂದು ಆರೋಪಿಸಿದ್ದಾರೆ.