
ವಿದ್ಯಾರ್ಥಿಗಳ ಹಕ್ಕುಗಳ ದಮನ ಕೂಡದು: ಹೈಕೋರ್ಟ್
ಮುಖ್ಯಮಂತ್ರಿಯಾಗಿ ಮುಂದುವರಿಯುವ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರ ʻವೈಯಕ್ತಿಕʼ- ನ್ಯಾಯಾಲಯ
ಏಪ್ರಿಲ್ 29- ಮುಖ್ಯಮಂತ್ರಿಯಾಗಿ ಮುಂದುವರಿಯುವ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರ ʻವೈಯಕ್ತಿಕʼ. ಆದರೆ, ಶಾಲೆಗೆ ಹೋಗುವ ಮಕ್ಕಳ ಮೂಲಭೂತ ಹಕ್ಕುಗಳನ್ನು ತುಳಿಯಲಾಗುತ್ತದೆ ಎಂದರ್ಥವಲ್ಲ ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ಹೇಳಿದೆ.
ಕೇಜ್ರಿವಾಲ್ ಅವರ ಅನುಪಸ್ಥಿತಿಯಿಂದಾಗಿ ಎಂಸಿಡಿ ಶಾಲೆಗಳ ವಿದ್ಯಾರ್ಥಿಗಳು ಉಚಿತ ಪಠ್ಯಪುಸ್ತಕ, ಬರವಣಿಗೆ ಸಾಮಗ್ರಿ ಮತ್ತು ಸಮವಸ್ತ್ರವಿಲ್ಲದೆ ಇರಲು ಅನುಮತಿ ನೀಡುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ದೆಹಲಿ ಸೇರಿದಂತೆ ಯಾವುದೇ ರಾಜ್ಯದ ಮುಖ್ಯಮಂತ್ರಿ ಹುದ್ದೆ ಔಪಚಾರಿಕವಲ್ಲ. ಯಾವುದೇ ಬಿಕ್ಕಟ್ಟು ಅಥವಾ ನೈಸರ್ಗಿಕ ವಿಕೋಪ ಸಂಭವಿಸಿದಲ್ಲಿ 24x7 ಲಭ್ಯವಿರಬೇಕಾದ ಹುದ್ದೆ ಎಂದು ಹಂಗಾಮಿ ಮು.ನ್ಯಾ.ಮನಮೋಹನ್ ಮತ್ತು ನ್ಯಾ. ಮನ್ಮೀತ್ ಪಿಎಸ್ ಅರೋರಾ ಅವರ ಪೀಠ ಹೇಳಿದೆ.
ʻಇಂಥ ಹುದ್ದೆಯನ್ನು ಹೊಂದಿರುವವರು ದೀರ್ಘಾವಧಿ ಅಥವಾ ಅನಿಶ್ಚಿತ ಅವಧಿಯವರೆಗೆ ಅಜ್ಞಾತ ಅಥವಾ ಗೈರುಹಾಜರಾಗಬಾರದು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎನ್ನುವುದು ತಪ್ಪುʼ ಎಂದು ಪೀಠ ಹೇಳಿದೆ.
ಶಾಲೆಗಳಿಗೆ ಶೈಕ್ಷಣಿಕ ಸಾಮಗ್ರಿ: ಹೊಸ ಶೈಕ್ಷಣಿಕ ವರ್ಷ ಆರಂಭವಾದ ನಂತರವೂ ಎಂಸಿಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ಸರಬರಾಜು ಮಾಡದೆ ಇರುವುದನ್ನು ಪ್ರಶ್ನಿಸಿ, ಎನ್‌ಜಿಒ ಸೋಷಿಯಲ್ ಜ್ಯೂರಿಸ್ಟ್ ಅರ್ಜಿ ದಾಖಲಿಸಿತ್ತು. ವಕೀಲ ಅಶೋಕ್ ಅಗರ್ವಾಲ್ ಅವರು ಪ್ರತಿನಿಧಿಸುತ್ತಿದ್ದಾರೆ.
ಬೇಸಿಗೆ ರಜೆಗೆ ಶಾಲೆಗಳು ಮುಚ್ಚಲಿರುವುದರಿಂದ, ಅಗತ್ಯ ವಸ್ತುಗಳನ್ನು ತಕ್ಷಣ ಪೂರೈಸುವಂತೆ ಎಂಸಿಡಿ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.