ಕೇಜ್ರಿವಾಲ್ ಅವರನ್ನು ನಿಧಾನ ಸಾವಿಗೆ ತಳ್ಳಲಾಗುತ್ತಿದೆ: ಎಎಪಿ
x

ಕೇಜ್ರಿವಾಲ್ ಅವರನ್ನು ನಿಧಾನ ಸಾವಿಗೆ ತಳ್ಳಲಾಗುತ್ತಿದೆ: ಎಎಪಿ


ನವದೆಹಲಿ, ಏಪ್ರಿಲ್‌ 20- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ಮತ್ತು ವೈದ್ಯರ ಸಮಾಲೋಚನೆಯನ್ನು ನಿರಾಕರಿಸುವ ಮೂಲಕ ಜೈಲಿನಲ್ಲಿ ʻನಿಧಾನ ಸಾವಿನʼ ಕಡೆಗೆ ತಳ್ಳಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಶನಿವಾರ ಆರೋಪಿಸಿದೆ.

ಟೈಪ್ -2 ಮಧುಮೇಹ ಹೊಂದಿರುವ ಕೇಜ್ರಿವಾಲ್ ಅವರು ಇನ್ಸುಲಿನ್ ಮತ್ತು ಕುಟುಂಬದ ವೈದ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್‌ಗೆ ಅನುಮತಿ ಕೇಳುತ್ತಿದ್ದಾರೆ. ಆದರೆ, ಜೈಲು ಆಡಳಿತ ಮನವಿಯನ್ನು ನಿರಾಕರಿಸುತ್ತಿದೆ ಎಂದು ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್ ನಿರಾಕರಿಸಿದ ಆರೋಪದ ಮೇಲೆ ತಿಹಾರ್ ಜೈಲು ಆಡಳಿತ, ಬಿಜೆಪಿ, ಕೇಂದ್ರ ಸರ್ಕಾರ ಮತ್ತು ದೆಹಲಿ ಎಲ್‌ಜಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ʻಕೇಜ್ರಿವಾಲ್‌ ಕಳೆದ 20-22 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದಾರೆ. ಅವರ ನಿಧಾನ ಸಾವಿಗೆ ಪಿತೂರಿ ನಡೆಯುತ್ತಿದೆʼ ಎಂದು ದೂರಿದರು.

ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ʻಬಂಧಿಸಿದ ನಂತರ ಕೇಜ್ರಿವಾಲ್‌ ಅವರ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ನೀಡಿಲ್ಲ. ಇದು ಆಘಾತಕಾರಿ ಮತ್ತು ಆತಂಕಕಾರಿʼ ಎಂದು ಶುಕ್ರವಾರ ಹೇಳಿದ್ದರು.

ವೈದ್ಯಕೀಯ ಜಾಮೀನು ಪಡೆಯಲು ಕೇಜ್ರಿವಾಲ್ ಪ್ರತಿದಿನ ಮಾವಿನಹಣ್ಣು, ಸಿಹಿತಿಂಡಿ ಸೇರಿದಂತೆ ಹೆಚ್ಚು ಸಕ್ಕರೆ ಅಂಶ ಇರುವ ಆಹಾರ ಸೇವಿಸುತ್ತಿದ್ದಾರೆ ಎಂದು ಇಡಿ ಗುರುವಾರ ನ್ಯಾಯಾಲಯದಲ್ಲಿ ಹೇಳಿತ್ತು.

ʻಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾವಿನ ಹಣ್ಣುಇದ್ದಿತ್ತುʼ ಎಂದು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ʻಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟ ಅಳೆಯಲು ಮಾಪಕವನ್ನು ಬಳಸಲು ನ್ಯಾಯಾಲಯ ಅನುಮತಿಸಿದೆ. ಅವರು ಜೈಲಿನಿಂದ ಹೊರಬಂದಾಗ ಮೂತ್ರಪಿಂಡ, ಹೃದಯ ಮತ್ತು ಇತರ ಅಂಗಗಳ ಚಿಕಿತ್ಸೆಗೆ ಹೋಗಬೇಕಾಗುತ್ತದೆʼ ಎಂದು ಆರೋಗ್ಯ ಸಚಿವ ಭಾರದ್ವಾಜ್ ಹೇಳಿದರು.

Read More
Next Story