ಬರ ಪರಿಹಾರ ವಿಳಂಬ: ಸಿಎಂ ನೇತೃತ್ವದಲ್ಲಿ ಗೋ ʼಬ್ಯಾಕ್‌ ಅಮಿತ್‌ ಶಾʼ ಹೋರಾಟ
x
ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಸಂಪುಟ ಸಚಿವರು ಮತ್ತು ಶಾಸಕರು ಬರ ಪರಿಹಾರ ನಿಧಿ ಬಿಡುಗಡೆ ವಿಳಂಬಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು

ಬರ ಪರಿಹಾರ ವಿಳಂಬ: ಸಿಎಂ ನೇತೃತ್ವದಲ್ಲಿ ಗೋ ʼಬ್ಯಾಕ್‌ ಅಮಿತ್‌ ಶಾʼ ಹೋರಾಟ

ಕನಿಷ್ಟ ಬರ ಪರಿಹಾರ ಬಿಡುಗಡೆ ಮಾಡದೇ ರಾಜ್ಯದ ರೈತರನ್ನು ಸತಾಯಿಸುತ್ತಿರುವ ಮೋದಿ ಮತ್ತು ಶಾ ಯಾವ ಮುಖ ಹೊತ್ತು ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ? ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ʼಗೋ ಬ್ಯಾಕ್ ಮೋದಿʼ ಮತ್ತು ʼಗೋ ಬ್ಯಾಕ್ ಶಾʼ ಎಂದು ಘೋಷಣೆ ಹಾಕುತ್ತಿದೆʼ ಎಂದು ಹೇಳಿದರು.


ಬೆಂಗಳೂರು: ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದ ಆವರಣದ ಮಹಾತ್ಮಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್‌ ಧರಣಿ ನಡೆಸಿತು.

ʻಕರ್ನಾಟಕ ಮತ್ತು ರಾಜ್ಯದ ಜನತೆಗೆ ಬಿಜೆಪಿ ನೇತೃತ್ವದ ಸರ್ಕಾರ ಮಾಡಿರುವ ಅನ್ಯಾಯದ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗಿದೆʼ ಎಂದು ಸಿದ್ದರಾಮಯ್ಯ ಹೇಳಿದರು.

ʻಪ್ರಧಾನಿ ಮೋದಿ ಮತ್ತು ಶಾ ಕರ್ನಾಟಕ ಮತ್ತು ಅದರ ರೈತರನ್ನು ದ್ವೇಷಿಸುತ್ತಾರೆ. ಹಾಗಾಗಿಯೇ ಅವರ ಸರ್ಕಾರ ತೀವ್ರ ಬರಗಾಲದ ಏಳು ತಿಂಗಳ ನಂತರವೂ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿಲ್ಲ. 100 ವರ್ಷಗಳಲ್ಲಿ ರಾಜ್ಯ ಇಷ್ಟು ಭೀಕರ ಬರ ಕಂಡಿರಲಿಲ್ಲʼ ಎಂದು ಮುಖ್ಯಮಂತ್ರಿ ಹೇಳಿದರು.

ಸರ್ಕಾರದ ಸಮೀಕ್ಷೆ ವರದಿಗಳನ್ನು ಉಲ್ಲೇಖಿಸಿ, ರಾಜ್ಯದ 240 ತಾಲೂಕುಗಳ ಪೈಕಿ 223 ತಾಲೂಕುಗಳು ಬರ ಪೀಡಿತವಾಗಿವೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾನದಂಡಗಳ ಪ್ರಕಾರ, ಬರ ಪರಿಹಾರ ನೆರವು ನೀಡುವಂತೆ ನಾವು ಅವರನ್ನು ಕೇಳಿದಾಗ ಅವರು ಪ್ರತಿಕ್ರಿಯಿಸಲಿಲ್ಲ. ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ, ಬರ ಪರಿಹಾರ ಕಾಮಗಾರಿಗೆ 18,171 ಕೋಟಿ ರೂ. ಅಗತ್ಯವಿದೆ ಎಂದು ರಾಜ್ಯ ನಿರ್ಣಯಿಸಿದ್ದು, ಅನುದಾನ ಬಿಡುಗಡೆ ಕೋರಿ ಕೇಂದ್ರಕ್ಕೆ ಹಲವಾರು ಜ್ಞಾಪಕ ಪತ್ರಗಳನ್ನುಕಳಿಸಿದರೂ, ಮೌನವೇ ಉತ್ತರವಾಯಿತುʼ ಎಂದು ಹೇಳಿದರು.

ಅಪಾರ ಹಾನಿ

ʻಅಸಮರ್ಪಕ ಮಳೆಯಿಂದ 48,000 ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ನಾಶವಾಗಿದ್ದು, ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲದಿಂದ ಪ್ರತಿ ರೈತರಿಗೆ 2,000 ರೂ. ಪಾವತಿಸಿದೆ. 34 ಲಕ್ಷ ರೈತರಿಗೆ 650 ಕೋಟಿ ರೂ. ನೀಡಲಾಗಿದೆ. ಕನಿಷ್ಟ ಬರ ಪರಿಹಾರ ಬಿಡುಗಡೆ ಮಾಡದೇ ರಾಜ್ಯದ ರೈತರನ್ನು ಸತಾಯಿಸುತ್ತಿರುವ ಮೋದಿ ಮತ್ತು ಶಾ ಯಾವ ಮುಖ ಹೊತ್ತು ಕರ್ನಾಟಕಕ್ಕೆ ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ? ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ʼಗೋ ಬ್ಯಾಕ್ ಮೋದಿʼ ಮತ್ತು ʼಗೋ ಬ್ಯಾಕ್ ಶಾʼ ಎಂದು ಘೋಷಣೆ ಹಾಕುತ್ತಿದೆʼ ಎಂದು ಹೇಳಿದರು.

ಬರ ನಿರ್ವಹಣೆ ನಿಧಿ ಒದಗಿಸುವ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿದ ಸುಪ್ರೀಂ ಕೋರ್ಟಿಗೆ ಸಿದ್ದರಾಮಯ್ಯ ಸೋಮವಾರ ಧನ್ಯವಾದ ಅರ್ಪಿಸಿದರು. ರಾಜ್ಯದ ಜನರಿಗೆ ನ್ಯಾಯ ಮತ್ತು ಪರಿಹಾರ ಕೊಡಿಸುವಲ್ಲಿ ತಮ್ಮ ಸರ್ಕಾರ ನಡೆಸಿದ ಹೋರಾಟದ ಯಶಸ್ವಿಯಾಗಿದೆ ಎಂದು ಬಣ್ಣಿಸಿದರು.

ಕರ್ನಾಟಕ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆಲವು ಕಾಂಗ್ರೆಸ್ ಸಂಸದರು ಮತ್ತು ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣೆ ಆಯೋಗದ ಸಮ್ಮತಿ‌

ಬರ ನಿರ್ವಹಣೆಗೆ ಹಣಕಾಸು ನೆರವು ನೀಡುವ ಕುರಿತು ಕರ್ನಾಟಕ ಎತ್ತಿರುವ ಸಮಸ್ಯೆಯನ್ನು ಪರಿಸರಿಸಲು ಚುನಾವಣೆ ಆಯೋಗ ಅನುಮತಿ ನೀಡಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ರಾಜ್ಯಕ್ಕೆ ಎನ್‌ಡಿಆರ್‌ಎಫ್‌ನಿಂದ ಹಣಕಾಸು ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ನಡೆಸುತ್ತಿದೆ.

ʻಈ ಪ್ರಶ್ನೆಯನ್ನು ಬಗೆಹರಿಸಲು ಚುನಾವಣೆ ಆಯೋಗ ಸರ್ಕಾರಕ್ಕೆ ಅನುಮತಿ ನೀಡಿದೆ. ತ್ವರಿತವಾಗಿ ಮಾಡಲಾಗುತ್ತದೆ,ʼ ಎಂದು ಕೇಂದ್ರದ ಪರ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಪೀಠಕ್ಕೆ ತಿಳಿಸಿದರು. ʻಸರ್ಕಾರ ಪರಿಹಾರ ಕುರಿತು ನಿರ್ಧರಿಸಲಿದೆ. ಆ ಬಳಿಕ ಮುಂದಿನ ವಾರ ಈ ವಿಷಯವನ್ನು ಕೈಗೆತ್ತಿಕೊಳ್ಳಬಹುದುʼ ಎಂದು ಅವರು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ʻಇದೆಲ್ಲವೂ ಸೌಹಾರ್ದಯುತವಾಗಿ ನಡೆಯಬೇಕು... ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆʼ ಎಂದು ಪೀಠ ಹೇಳಿತ್ತು.

ಆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ,ʻ ಗೌರವಾನ್ವಿತ ಸುಪ್ರೀಂ ಕೋರ್ಟಿನ ಮಧ್ಯಸ್ಥಿಕೆಯಿಂದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಕುರಿತು ಈ ವಾರದೊಳಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ. ರಾಜ್ಯ 2023ರ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿದ ಮನವಿ ಬಗ್ಗೆ ನಿರ್ಧಾರ ತೆಗೆದುಕೊಳ್ಳದ ಕಾರಣ, ಕರ್ನಾಟಕ ರಿಟ್ ಅರ್ಜಿ ಸಲ್ಲಿಸಬೇಕಾಯಿತುʼ ಎಂದು ಬರೆದಿದ್ದರು.

ʻಕರ್ನಾಟಕದ ಜನತೆಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡುವ ನಮ್ಮ ಹೋರಾಟದಲ್ಲಿ ಇದೊಂದು ಮೈಲಿಗಲ್ಲು ಮತ್ತು ಯಶಸ್ಸುʼ ಎಂದು ಸಿದ್ದರಾಮಯ್ಯ ಹೇಳಿದ್ದರು.

Read More
Next Story