ಪತ್ರಕರ್ತನ ಮೇಲೆ ಹಲ್ಲೆ
x

ಪತ್ರಕರ್ತನ ಮೇಲೆ ಹಲ್ಲೆ

ಅಮಿತ್‌ ಶಾ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪತ್ರಕರ್ತನ ಮೇಲೆ ಹಲ್ಲೆ ನಡೆದಿದ್ದು, ಪ್ರೆಸ್‌ ಕ್ಲಬ್‌ ಮತ್ತು ರಾಜಕೀಯ ಪಕ್ಷಗಳು ಘಟನೆಯನ್ನು ಖಂಡಿಸಿವೆ.


ಉತ್ತರಪ್ರದೇಶದ ರಾಯ್‌ ಬರೇಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸಭೆಯಲ್ಲಿ ಮಹಿಳೆಯರಿಗೆ ಪ್ರಶ್ನೆ ಕೇಳಿ ಉತ್ತರಗಳನ್ನು ದಾಖಲಿಸುತ್ತಿದ್ದ ಪತ್ರಕರ್ತರೊಬ್ಬರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಮೋಲಿಟಿಕ್ಸ್‌ ಡಿಜಿಟಲ್‌ ವೇದಿಕೆಯ ರಾಘವ್‌ ತ್ರಿವೇದಿ ಹಲ್ಲೆಗೊಳಗಾದವರು. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತ್ರಿವೇದಿ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಮಹಿಳೆಯರನ್ನು ಮಾತನ್ನಾಡಿಸಿದ್ದು, ಅವರು ʻನಮಗೆ 100 ರೂ. ನೀಡಲಾಗಿದೆ. ಭಾಷಣ ಮಾಡುತ್ತಿರುವವರು ಯಾರೆಂದು ನಮಗೆ ಗೊತ್ತಿಲ್ಲʼ ಎಂದು ಹೇಳಿದರೆಂದು ವರದಿ ಮಾಡಿದ್ದರು. ಈ ಬಗ್ಗೆ ಬಿಜೆಪಿ ಕಾರ್ಯಕರ್ತರನ್ನು ಅವರು ಪ್ರಶ್ನಿಸಿದಾಗ, ಹಲ್ಲೆ ನಡೆಸಿದ್ದಲ್ಲದೆ, ವಿಡಿಯೋ ತೆಗೆದುಹಾಕು ಎಂದು ಬೆದರಿಸಿದ್ದರು. ʻತಮ್ಮನ್ನು ಯಾರೂ ಇಲ್ಲದ ಪ್ರದೇಶಕ್ಕೆ ಕರೆದೊಯ್ಯಲಾಯಿತು ಮತ್ತು ಚಿತ್ರಗಳನ್ನು ತೆಗೆದುಹಾಕು ಎಂದು ಒತ್ತಡ ಹೇರಲಾಯಿತು. ಒಪ್ಪದೆ ಇದ್ದಾಗ, ಹಲ್ಲೆ ನಡೆಸಿದರು. ಪೊಲೀಸರು ಇಲ್ಲವೇ ಸುತ್ತಮುತ್ತಲಿನವರು ನೆರವಿಗೆ ಬರಲಿಲ್ಲ. ತಮ್ಮನ್ನು ಮುಲ್ಲಾ ಎಂದು ಕರೆದರುʼ ಎಂದು ತ್ರಿವೇದಿ ಹೇಳಿದರು.

ʻತಾವು ಮಹಿಳೆಯರ ಹೇಳಿಕೆಗಳನ್ನು ರೆಕಾರ್ಡ್‌ ಮಾಡಿಕೊಂಡಿರುವುದಾಗಿ ಹೇಳಿದಾಗ, ಬಲವಂತವಾಗಿ ಯಾರೂ ಪ್ರದೇಶಕ್ಕೆ ಕರೆದೊಯ್ದರು ಮತ್ತು ವಿಡಿಯೋ ತೆಗೆದುಹಾಕಲು ಹೇಳಿದರು. ನಿರಾಕರಿಸಿದಾಗ ಹಲ್ಲೆ ನಡೆಸಿದರು. 40-50 ಪೊಲೀಸರಿದ್ದರು. ನೆರೆದಿದ್ದವರ ಬಳಿ ಬೇಡಿಕೊಂಡರೂ, ಅವರು ಮಧ್ಯಪ್ರವೇಶಿಸಲಿಲ್ಲ.150 -200 ಸಲ ಗುದ್ದಿದರು. ನಾನು ಪ್ರಜ್ಞೆ ಕಳೆದುಕೊಂಡೆ. ಪ್ರಜ್ಞೆ ಬಂದಾಗ ಆಸ್ಪತ್ರೆಯಲ್ಲಿದ್ದೆʼ ಎಂದು ವಿವರಿಸಿದರು.

ತ್ರಿವೇದಿ ಹಾಗೂ ಕ್ಯಾಮರಾಮನ್‌ ಸಂಜೀತ್‌ ಸಾಹ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಆರು ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರತಿಪಕ್ಷಗಳು ಮತ್ತು ಹಿರಿಯ ಪತ್ರಕರ್ತರು ಘಟನೆಯನ್ನು ಖಂಡಿಸಿದ್ದಾರೆ. ʻಸೋಲಿನ ಭೀತಿಯಿಂದ ಬಿಜೆಪಿ ಹತಾಶಗೊಂಡಿದೆʼ ಎಂದು ಕಾಂಗ್ರೆಸ್‌ ಹೇಳಿದೆ. ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ ಘಟನೆಯನ್ನು ಖಂಡಿಸಿದ್ದು, ಪೊಲೀಸರು ಮತ್ತು ಚುನಾವಣೆ ಆಯೋಗದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ದೇಶದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳಿಗೆ ಘಟನೆ ಸಾಕ್ಷಿಯಾಗಿದೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ದೇಶವು 176ರಲ್ಲಿ 159ನೇ ಸ್ಥಾನ ಪಡೆದಿದೆ. ಪ್ರಜಾಪ್ರಭುತ್ವವಿರುವ ದೇಶಕ್ಕೆ ಇದು ಹೊಂದಾಣಿಕೆ ಆಗುವುದಿಲ್ಲ ಎಂದು ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌ ಟೀಕಿಸಿದೆ.

Read More
Next Story