ಜಗನ್, ನಾಯ್ಡು ಬಿಜೆಪಿಯ ಕೈಗೊಂಬೆಗಳು: ಶರ್ಮಿಳಾ
x

ಜಗನ್, ನಾಯ್ಡು ಬಿಜೆಪಿಯ ಕೈಗೊಂಬೆಗಳು: ಶರ್ಮಿಳಾ


ಕಾಕಿನಾಡ (ಆಂಧ್ರಪ್ರದೇಶ), ಏಪ್ರಿಲ್‌ 29- ವೈಎಸ್‌ಆರ್‌ಸಿಪಿ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಇಬ್ಬರೂ ಬಿಜೆಪಿಯ ಕೈಗೊಂಬೆಗಳು ಎಂದು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಸೋಮವಾರ ಆರೋಪಿಸಿದ್ದಾರೆ.

ಕಾಕಿನಾಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ,ʻಕಳೆದ 10 ವರ್ಷಗಳಲ್ಲಿ ರಾಜ್ಯ ಒಂದೇ ಒಂದು ಹೆಜ್ಜೆ ಮುಂದಿಟ್ಟಿಲ್ಲ. ಚಂದ್ರ ಬಾಬು ಮತ್ತು ಜಗನ್‌ ಅವರಿಂದ ಯಾವುದೇ ಪ್ರಯೋಜನವಿಲ್ಲ. ಇಬ್ಬರೂ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಒಬ್ಬರು ಮೈತ್ರಿ ಮಾಡಿಕೊಂಡಿದ್ದು, ಮತ್ತೊಬ್ಬರು ಕೈಗೊಂಬೆ ಆಗಿದ್ದಾರೆʼ ಎಂದು ದೂರಿದರು.

ʻಬಿಜೆಪಿ ಆಂಧ್ರಪ್ರದೇಶಕ್ಕೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದೆ. ರಾಜ್ಯಕ್ಕೆ 10 ವರ್ಷಗಳ ವಿಶೇಷ ವರ್ಗದ ಸ್ಥಾನಮಾನದ ಭರವಸೆ ನೀಡಿತ್ತು. ಆದರೆ, ನೀಡದೆ ವಂಚಿಸಿದೆ. ಪೊಲಾವರಂ ಯೋಜನೆಯನ್ನುನಿರ್ಲಕ್ಷಿಸಿದೆ. ಹೀಗಿದ್ದರೂ, ನಾಯ್ಡು ಮತ್ತು ಜಗನ್‌, ಕೇಸರಿ ಪಕ್ಷದ ಜೊತೆಗೆ ಕೈ ಜೋಡಿಸಿದ್ದಾರೆʼ ಎಂದು ಹೇಳಿದರು.

ʻಆಂಧ್ರಪ್ರದೇಶವನ್ನು ಕಾಂಗ್ರೆಸ್ ಮಾತ್ರ ಅಭಿವೃದ್ಧಿಪಡಿಸಬಹುದು. ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ 10 ವರ್ಷಗಳ ವಿಶೇಷ ವರ್ಗದ ಸ್ಥಾನಮಾನ ನೀಡಲಾಗುತ್ತದೆʼ ಎಂದು ಹೇಳಿದರು.

ಕಾಕಿನಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಎಂ.ಎಂ. ಪಲ್ಲಮರಾಜು ಅವರಿಗೆ ಮತ ನೀಡುವಂತೆ ಕೋರಿದರು. ಮೇ 13ರಂದು ರಾಜ್ಯದ 175 ವಿಧಾನಸಭೆ ಮತ್ತು 25 ಲೋಕಸಭೆ ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ.

Read More
Next Story