ಕೇರಳ: ಎಡಪಂಥೀಯರ ವಿರುದ್ಧ ರಾಹುಲ್ ವಾಗ್ದಾಳಿ
ಐದು ವರ್ಷಗಳ ಹಿಂದೆ, ಏಪ್ರಿಲ್ 4, 2019 ರಂದು ವಯನಾಡ್‌ನಿಂದ ನಾಮಪತ್ರ ಸಲ್ಲಿಸಿದ ನಂತರ ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ಕೇರಳದಲ್ಲಿ ತಮ್ಮ ರಾಜಕೀಯ ವಿರೋಧಿಯಾದ ಎಡ ಪಕ್ಷಗಳ ವಿರುದ್ಧ ಒಂದೇ ಒಂದು ಮಾತು ಆಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ʻಕೇರಳದಲ್ಲಿ ಸಿಪಿಐ(ಎಂ) ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆಯಿದೆ. ಇದು ಮುಂದುವರಿಯುತ್ತದೆ. ಸಿಪಿಐ(ಎಂ) ನನ್ನ ವಿರುದ್ಧ ಸ್ಪರ್ಧಿಸಲೇಬೇಕಿದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ, ನಾನು ಅವರ ವಿರುದ್ಧ ಒಂದು ಮಾತನ್ನೂ ಆಡುವುದಿಲ್ಲ. ದಕ್ಷಿಣ ಭಾರತದಲ್ಲಿ ಏಕತೆ ಮುಖ್ಯ ಎಂಬ ಸಂದೇಶವನ್ನು ಸಾರಲು ನಾನು ಇಲ್ಲಿದ್ದೇನೆʼ ಎಂದು ಅವರು ಹೇಳಿದ್ದರು. ಆದರೆ, 5 ವರ್ಷಗಳ ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಪಿಣರಾಯಿ ವಿರುದ್ಧ ವಾಗ್ದಾಳಿ: ಕೇರಳದ ಎಡ ಪಕ್ಷಗಳು ಮತ್ತು ನಿರ್ದಿಷ್ಟವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ ತೀರ್ವ ದಾಳಿ ನಡೆಸಿದ್ದಾರೆ. ʻನಾನು 24x7 ಬಿಜೆಪಿ ಮೇಲೆ ದಾಳಿ ಮಾಡುತ್ತಿದ್ದೇನೆ ಮತ್ತು ಕೇರಳದ ಮುಖ್ಯಮಂತ್ರಿ ನನ್ನ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಿಜೆಪಿ-ಆರ್‌ಎಸ್ ಎಸ್ ಒಂದಿಗೆ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಿದೆ ಮತ್ತು ಅದಕ್ಕಾಗಿ ವೆಚ್ಚ ತೆರಬೇಕಿದೆ. ನೀವು ಬಿಜೆಪಿ ವಿರುದ್ಧ ಹೋರಾಟ ನಡೆಸಿದರೆ, ಬಿಜೆಪಿಯವರು ಸಮಸ್ತ ಬಲ ಪ್ರಯೋಗಿಸಿ ನಿಮ್ಮ ಮೇಲೆ ದಾಳಿ ಮಾಡುತ್ತಾರೆ. ನಾನು ಪದೇಪದೇ ದಾಳಿಗೆ ಒಳಗಾಗಿದ್ದೇನೆ; ಇಬ್ಬರು ಮುಖ್ಯಮಂತ್ರಿಗಳು ಜೈಲು ಪಾಲಾಗಿದ್ದಾರೆ : ಆದರೆ, ಕೇರಳ ಸಿಎಂ ಹೇಗೆ ಉಳಿದುಕೊಂಡರು? ಕೇರಳ ಮತ್ತು ದೇಶದ ಜನರಿಗೆ ಯಾರು ದೇಶದ ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸುತ್ತಾರೆ ಮತ್ತು ಯಾರು ರಕ್ಷಿಸುವುದಿಲ್ಲ ಎಂದು ತಿಳಿದಿದೆʼ ಎಂದು ರಾಹುಲ್ ಗಾಂಧಿ ಪಾಲಕ್ಕಾಡ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.
ಸಿಎಂ ತಿರುಗೇಟು: ಪಿಣರಾಯಿ ವಿಜಯನ್ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ʻತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರ ಅಜ್ಜಿಯ ಕ್ರಮಗಳು ಸಹ ನನ್ನ ಸಂಕಲ್ಪವನ್ನು ಮುರಿಯಲು ಸಾಧ್ಯವಾಗಲಿಲ್ಲ. ಒಂದೂವರೆ ವರ್ಷ ಜೈಲಿನಲ್ಲಿ ಕಳೆದಿದ್ದೇನೆ. ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಒತ್ತಡ ಅಥವಾ ಜೈಲು ಶಿಕ್ಷೆಯ ಬೆದರಿಕೆಗಳು ನಮ್ಮನ್ನು ಬೆದರಿಸಲಾರವುʼ ಎಂದಿದ್ದಾರೆ. ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಸಂಸ್ಥೆಗಳ ತನಿಖೆಯನ್ನು ತಪ್ಪಿಸಲು ಎಡಪಕ್ಷಗಳು ಮತ್ತು ಬಿಜೆಪಿ ನಡುವೆ ರಹಸ್ಯ ಮೈತ್ರಿ ಇದೆ ಎಂದು ರಾಹುಲ್ ಆರೋಪಿಸಿದ್ದಾರೆ. ಕೇರಳದ ರಾಜಕೀಯದಲ್ಲಿ ನಿರ್ಣಾಯಕ ಅಂಶವಾಗಿರುವ ಅಲ್ಪಸಂಖ್ಯಾತ ಮತದಾರರನ್ನು ಆಕರ್ಷಿಸುವ ಪ್ರಯತ್ನ ಎನ್ನಲಾಗಿದೆ.
ಎಡ ಮತ್ತು ಹಿಂದುತ್ವ: ಎಡ ಪ್ರಜಾಸತ್ತಾತ್ಮಕ ಒಕ್ಕೂಟ (ಎಲ್‌ಡಿಎಫ್)ವು ಸಿಎಎ-ಎನ್‌ಆರ್‌ಸಿ, ಏಕರೂಪ ನಾಗರಿಕ ಸಂಹಿತೆ(ಯುಸಿಸಿ), ಅಯೋಧ್ಯೆಯ ರಾಮ ಮಂದಿರ, ಗಾಜಾ ಮೇಲಿನ ಇಸ್ರೇಲ್ ದಾಳಿ ಕುರಿತು ದೃಢ ನಿಲುವು ತೆಗೆದುಕೊಂಡಿದೆ. ಕಾಂಗ್ರೆಸ್ಸಿನ ಆರಂಭಿಕ ಹಿಂಜರಿಕೆಯಿಂದ ಮುಸ್ಲಿಂ ಸಮುದಾಯಗಳಲ್ಲಿ ಎಡ ಪಕ್ಷಗಳ ಪರವಾದ ಭಾವನೆ ಬೆಳೆಯಲು ಕಾರಣವಾಯಿತು. ಜಮಾತೆ ಇಸ್ಲಾಮಿ ನೇತೃತ್ವದ ವೆಲ್ಫೇರ್ ಪಾರ್ಟಿ ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಅಂಗವಾದ ಎಸ್‌ಡಿಪಿಐ, ಯುಡಿಎಫ್‌ಗೆ ಬೆಂಬಲ ನೀಡಿವೆ. ಆದರೆ, ಪಿಎಫ್‌ಐ ಬೆಂಬಲ ಸ್ವೀಕರಿಸಲು ನಿರಾಕರಿಸಿತು.
ಆದರೆ, ತಳ ಮಟ್ಟದಲ್ಲಿ ಕಾಂಗ್ರೆಸ್ ಬಗ್ಗೆ ಅಸಮಾಧಾನ ಮತ್ತು ನಿರಾಶೆ ಬೆಳೆಯುತ್ತಿದೆ. ʻ2019 ರಲ್ಲಿ ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿದ್ದೆ. ಆದರೆ, ಈ ಬಾರಿ ಎಡ ಸಂಸದರನ್ನು ಸಂಸತ್ತಿಗೆ ಆಯ್ಕೆ ಮಾಡುವತ್ತ ಒಲವು ತೋರುತ್ತಿದ್ದೇನೆ,ʼ ಎಂದು ಜನಪ್ರಿಯ ಎನ್‌ಆರ್‌ಐ ಬ್ಲಾಗರ್ ಬಶೀರ್ ವಲ್ಲಿಕ್ಕುನ್ನು ಬರೆದಿದ್ದಾರೆ. ಅವರು ದೀರ್ಘಕಾಲ ಕಾಂಗ್ರೆಸ್ ಮತ್ತು ಯುಡಿಎಫ್ ಬೆಂಬಲಿಗರಾಗಿದ್ದರು. ʻಇಂಥ ಸವಾಲಿನ ಸಮಯದಲ್ಲಿ ಸಂತ್ರಸ್ತರ ಧ್ವನಿಯನ್ನು ಸಂಸತ್ತಿನಲ್ಲಿ ಕೇಳುವುದು ನಿರ್ಣಾಯಕವಾಗಿದೆ. ಕಳೆದ ಬಾರಿ ಚುನಾಯಿತರಾದ ಸಂಸದರಲ್ಲಿ ಒಬ್ಬರು ಅಥವಾ ಇಬ್ಬರನ್ನು ಹೊರತುಪಡಿಸಿ, ಬಹುತೇಕರು ನಿಷ್ಪರಿಣಾಮಕಾರಿಯಾಗಿದ್ದರು,ʼಎಂದು ಅವರು ಹೇಳಿದರು.
ಅವರ ಪ್ರಕಾರ, 19 ಯುಡಿಎಫ್ ಸಂಸದರಿಗೆ ಹೋಲಿಸಿದರೆ, ರಾಜ್ಯಸಭೆ ಸದಸ್ಯ ಸಿಪಿಐ(ಎಂ)ನ ಜಾನ್ ಬ್ರಿಟ್ಟಾಸ್ ಗಮನಾರ್ಹ ಪ್ರಭಾವ ಬೀರಿದರು. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ನಮ್ಮನ್ನು ನಿರಾಸೆಗೊಳಿಸಿದೆ. ಅವರು ಬಿಜೆಪಿಗೆ ಶರಣಾಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಬುಲ್ಡೋಜರ್ ರಾಜ್, ಸಿಎಎ, ರಾಮಮಂದಿರ ಮತ್ತು ಇಸ್ರೇಲ್ ಸಮಸ್ಯೆ ವಿರುದ್ಧ ಸಿಪಿಐ(ಎಂ) ನಾಯಕರು ಮುಂಚೂಣಿಯಲ್ಲಿದ್ದರು ಎಂದು ವಲ್ಲಿಕ್ಕುನ್ನು ಹೇಳಿದರು.
ಮುಸ್ಲಿಂ ಗುಂಪುಗಳ ಬೆಂಬಲ: ಯುಡಿಎಫ್‌ಗೆ ಕಳವಳಕರ ಅಂಶವೆಂದರೆ, ಯುಡಿಎಫ್ ಬೆಂಬಲಿಸುತ್ತಿದ್ದ ಕೇರಳದ ಪ್ರಮುಖ ಸುನ್ನಿ ಸಂಘಟನೆಯಾದ ಸಮಸ್ತ ಕೇರಳ ಜಮಿಯ್ಯತುಲ್ ಉಲೇಮಾ, ಕಮ್ಯುನಿಸ್ಟರ ಕಡೆಗೆ ಮೃದು ನಿಲುವು ತೋರಿಸುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳ ಬೆಂಬಲವನ್ನು ಹೆಚ್ಚಿಸುವ ಉದ್ದೇಶದಿಂದ ಯುಡಿಎಫ್ ಮತ್ತು ಕಾಂಗ್ರೆಸ್, ಸಿಪಿಐ(ಎಂ) ಮತ್ತು ಮುಖ್ಯಮಂತ್ರಿ ವಿಜಯನ್ ಅವರನ್ನು ಬಿಜೆಪಿಯೊಂದಿಗೆ ಜೋಡಿಸುವ ರಣತಂತ್ರ ರೂಪಿಸುತ್ತಿವೆ. ರಾಹುಲ್ ಗಾಂಧಿ ಮಾತ್ರವಲ್ಲ, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ʻಪಿಣರಾಯಿ ವಿಜಯನ್ ಕೇರಳದಲ್ಲಿ ಬಿಜೆಪಿಯ ನೇಮಕಗೊಳ್ಳದ ಕಾರ್ಯಾಧ್ಯಕ್ಷರು. ಅವರು ಮತ್ತು ಅವರ ಕುಟುಂಬದವರು ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆದರೆ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಏಕೆ ಪಿಣರಾಯಿ ಅವರನ್ನು ಮುಟ್ಟುತ್ತಿಲ್ಲ?ʼ ಎಂದು ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.
ಪ್ರತಿಯಾಗಿ ರಾಬರ್ಟ್ ವಾದ್ರಾ ಅವರ ಕಂಪನಿ, ಬಿಜೆಪಿಗೆ ಚುನಾವಣಾ ಬಾಂಡ್‌ಗಳನ್ನು ದೇಣಿಗೆ ನೀಡಿದ್ದನ್ನು ಸಿಪಿಐ(ಎಂ) ನಾಯಕರು ಪ್ರಶ್ನಿಸುತ್ತಿದ್ದಾರೆ. ʻರೇವಂತ್ ರೆಡ್ಡಿ ಅವರು ಪ್ರಧಾನಿ ಅವರ ಕಿರಿಯ ಸಹೋದರ ಎಂಬಂತೆ ಬಿಂಬಿಸುತ್ತಿದ್ದಾರೆ. ತೆಲಂಗಾಣದಲ್ಲಿ ಪಕ್ಷವನ್ನು ಬದಲಿಸಲು ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈಗ ಪಿಣರಾಯಿ ವಿಜಯನ್ ಅವರು ಬಿಜೆಪಿಯೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆʼ ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಪಿ.ಎಂ.ಅರ್ಶೋ ಹೇಳಿದ್ದಾರೆ.
ʻರಾಹುಲ್ ಗಾಂಧಿಯವರ ಸದಸ್ಯತ್ವ ರದ್ದಾದಾಗ ಮೊದಲು ಬೀದಿಗಿಳಿದದ್ದು ಸಿಪಿಐ(ಎಂ). ಆದರೆ, ಈಗ ಅವರು ಪಿಣರಾಯಿ ವಿಜಯನ್ ಅವರನ್ನು ಬಂಧಿಸುವಂತೆ ಕೇಂದ್ರೀಯ ಸಂಸ್ಥೆಗಳ ಪರ ವಕಾಲತ್ತು ವಹಿಸುತ್ತಿದ್ದಾರೆ. ಈ ಮಟ್ಟಕ್ಕೆ ಇಳಿದಿರುವುದು ಬೇಸರ ತಂದಿದೆʼ ಎಂದು ಸಿಪಿಐ(ಎಂ) ಮುಖಂಡ ಕೆವಿ ಅಬ್ದುಲ್ ಖಾದರ್ ಫೆಡರಲ್‌ಗೆ ತಿಳಿಸಿದರು.
ರಾಹುಲ್ ಆಗ ಮತ್ತು ಈಗ: ರಾಹುಲ್ ತಳ ಮಟ್ಟದಿಂದ ಸಂಗ್ರಹಿಸಿದ ಒಳಹರಿವನ್ನು ಪರಿಗಣಿಸಿ, ಪಕ್ಷದ ರಾಜ್ಯ ನಾಯಕತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿರಬಹುದು ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.ʻ ಕೇರಳದ ಪರಿಸ್ಥಿತಿಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕು. ಸಿಪಿಐ(ಎಂ) ವಿರುದ್ಧ ಆಕ್ರಮಣಕಾರಿ ಧೋರಣೆ ಅನುಸರಿಸಲು ರಾಜ್ಯ ನಾಯಕತ್ವವು ರಾಹುಲ್ ಗಾಂಧಿ ಅವರನ್ನು ನಿರಂತರವಾಗಿ ಒತ್ತಾಯಿಸಿದೆ. ಕೇರಳದಲ್ಲಿ ಮುಖಾಮುಖಿ ವಿಧಾನ ಅನುಸರಿಸುವುದು ಅನಿವಾರ್ಯʼ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ 2019ರಲ್ಲಿ ದಾಖಲೆ ಅಂತರದಿಂದ ಗೆದ್ದಿದ್ದರು. ಮೈತ್ರಿಕೂಟ 20 ರಲ್ಲಿ 19 ಸ್ಥಾನ ಗೆದ್ದುಕೊಂಡಿತು. ಐದು ವರ್ಷಗಳ ನಂತರ, ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಿದ್ದಾರೆ. ಸಿಪಿಐನ ಅನ್ನಿ ರಾಜಾ ಅವರಂಥ ಅಸಾಧಾರಣ ಎದುರಾಳಿಯನ್ನು ಎದುರಿಸುತ್ತಿದ್ದಾರೆ.