ಆಪ್‌ ಚುನಾವಣೆ ಪ್ರಚಾರದ ಹಾಡಿಗೆ ಆಯೋಗ ಆಕ್ಷೇಪ
x

ಆಪ್‌ ಚುನಾವಣೆ ಪ್ರಚಾರದ ಹಾಡಿಗೆ ಆಯೋಗ ಆಕ್ಷೇಪ

ಚುನಾವಣೆ ಆಯೋಗ ಬಿಜೆಪಿಯ ರಾಜಕೀಯ ಅಸ್ತ್ರ: ಆಪ್


ಆಮ್ ಆದ್ಮಿ ಪಕ್ಷದ ಪ್ರಚಾರ ಗೀತೆ 'ಜೈಲ್ ಕಾ ಜವಾಬ್, ವೋಟ್ ಸೇ ದೇಂಗೆ' ಚುನಾವಣೆ ಆಯೋಗದ ಮಾರ್ಗಸೂಚಿಗಳು ಮತ್ತು ಜಾಹೀರಾತು ಸಂಹಿತೆಯನ್ನು ಉಲ್ಲಂಘಿಸುವುದರಿಂದ, ಪರಿಷ್ಕರಿಸಲು ಸೂಚಿಸಿದೆ.

ಎಎಪಿ ಶಾಸಕ ದಿಲೀಪ್ ಪಾಂಡೆ ಬರೆದು ಹಾಡಿರುವ ಎರಡು ನಿಮಿಷಗಳ ಪ್ರಚಾರ ಗೀತೆಯನ್ನು ಕಳೆದ ವಾರ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಎಎಪಿ ಸಲ್ಲಿಸಿದ ಜಾಹೀರಾತಿನ ಪರಿಶೀಲನೆ ನಂತರ ದೆಹಲಿಯ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ನೇತೃತ್ವದ ಪ್ರಮಾಣೀಕರಣ ಸಮಿತಿಯು ಹಾಡಿನ ಬಗ್ಗೆ ಕೆಲವು ಅಭಿಪ್ರಾಯ ನೀಡಿದೆ ಎಂದು ತಿಳಿಸಿದೆ.

ʻಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು 1994 ಮತ್ತು ಚುನಾವಣೆ ಆಯೋಗದ ಮಾರ್ಗಸೂಚಿ/ನಿಯಮಗಳಡಿ ಜಾಹೀರಾತನ್ನು ಹಿಂತಿರುಗಿಸಲಾಗಿದೆ. ಮಾರ್ಪಾಡು ಮಾಡಿದ ನಂತರ ಮರುಸಲ್ಲಿಸಬೇಕು. ಸಮಿತಿಯ ನಿರ್ಧಾರವನ್ನು ಪಕ್ಷ ಒಪ್ಪದಿದ್ದರೆ, ರಾಜ್ಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿಗೆ ಮೇಲ್ಮನವಿ ಸಲ್ಲಿಸಬಹುದುʼ ಎಂದು ಆಯೋಗ ಹೇಳಿದೆ.

ಇದಕ್ಕೂ ಮೊದಲು, ದೆಹಲಿ ಚುನಾವಣೆ ಆಯೋಗವು ಕೆಲವು ಚಿತ್ರಗಳು ಮತ್ತು ಪದಗುಚ್ಛಗಳನ್ನು ʻಅಪಪ್ರಚಾರʼ ಮತ್ತು ʻಸಾಬೀತಾಗದ ಅಂಶಗಳ ಆಧಾರದ ಮೇಲೆ ಆಡಳಿತ ಪಕ್ಷದ ಟೀಕೆʼ, ನ್ಯಾಯಾಂಗ ಹಾಗೂ ಪೊಲೀಸರ ಮೇಲೆ ದೋಷಾರೋಪ ಮಾಡಿದೆ ಎಂದು ಹೇಳಿತ್ತು.

ಹಾಗಾದರೆ, ಹಾಡಿಗೆ ಇಸಿ ಆಕ್ಷೇಪಣೆಗಳೇನು?

ಮಾರ್ಗಸೂಚಿಗಳಿಗೆ ವಿರುದ್ಧ: ಹಾಡು ಇಸಿಐ ಮಾರ್ಗಸೂಚಿ ಮತ್ತು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು 1994 ರ ಜಾಹೀರಾತು ಸಂಹಿತೆಯ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಮೂಲಗಳು ಹೇಳಿವೆ. 'ಜೈಲ್ ಕಾ ಜವಾಬ್ ಹಮ್ ವೋಟ್ ಸೆ ದೇಂಗೆ' ಪದಗಳನ್ನು ಪದೇಪದೇ ಬಳಸುವುದರ ಜೊತೆಗೆ, 'ಗುಂಡಾ ಗರ್ದಿ ಕೆ ಖಿಲಾಫ್ ವೋಟ್ ದೇಂಗೆ' ಮತ್ತು 'ತಾನಾಶಾಹಿ ಹಾರ್ನೆ ವಾಲಿ ಪಾರ್ಟಿ ಕೊ ಹಮ್ ಚೋಟ್ ದೇಂಗೆ' ನುಡಿಗಟ್ಟುಗಳು ಇಸಿಐ ಮಾರ್ಗಸೂಚಿ 2.5 (ಡಿ)ಯನ್ನು ಹಾಗೂ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು 1994 ರಡಿ ಸೂಚಿಸಲಾದ ಪ್ರೋಗ್ರಾಂ ಮತ್ತು ಜಾಹೀರಾತು ಸಂಹಿತೆಯ ನಿಯಮ 6(1)(ಜಿ)ಯನ್ನು ಉಲ್ಲಂಘಿಸುತ್ತವೆ ಎಂದು ಆಯೋಗ ಹೇಳಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಫೋಟೋ ಹಿಡಿದಿರುವ ಆಕ್ರಮಣಕಾರಿ ಗುಂಪನ್ನು ತೋರಿಸುವ ಚಿತ್ರಗಳು 'ನ್ಯಾಯಾಂಗದ ಮೇಲೆ ದೋಷಾರೋಪ ಮಾಡುತ್ತವೆ. ಪ್ರತಿಭಟನಾಕಾರರು ಮತ್ತು ಪೊಲೀಸರ ಘರ್ಷಣೆಯ ಕ್ಲಿಪ್‌ನೊಂದಿಗೆ ಬರುವ 'ತಾನಾಶಾಹಿ ಹಾರ್ನೆ ವಾಲಿ ಪಾರ್ಟಿ ಕೊ ಹಮ್ ಚೋಟ್ ದೇಂಗೆ' ವಾಕ್ಯಕ್ಕೆ ಆಯೋಗ ಆಕ್ಷೇಪಿಸಿದೆ. ಇದು ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಹೇಳಿದೆ.

ಪೊಲೀಸರು, ನ್ಯಾಯಾಂಗ, ಇತರ ಪಕ್ಷಗಳ ಮೇಲೆ ಕೆಟ್ಟ ಅಭಿಪ್ರಾಯ: ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಪೊಲೀಸ್ ಬೆಂಗಾವಲಿನಲ್ಲಿ ಇರುವ ಕ್ಲಿಪ್‌ನೊಂದಿಗೆ ಬಳಸಿದ ' ಗುಂಡಾ ಗರ್ದಿ ಕೆ ಖಿಲಾಫ್ ವೋಟ್ ದೇಂಗೆ' ಮತ್ತು ' 'ತಾನಾಶಾಹಿ ಹಾರ್ನೆ ವಾಲಿ ಪಾರ್ಟಿ ಕೊ ಹಮ್ ಚೋಟ್ ದೇಂಗೆʼ ಪದಗುಚ್ಛಗಳು ಪೊಲೀಸರನ್ನು ʻಕೆಟ್ಟದಾಗಿ ತೋರಿಸುತ್ತವೆʼ ಎಂದು ಇಸಿ ಹೇಳಿದೆ.

'ಅವಾಜೇ ಖಿಲಾಫ್ ಥಿ ಜೋ ಸಬ್ಕೋ ಜೈಲ್ ಮೆ ದಾಲ್ ದಿಯಾ, ಹಸ್‌ ಉನ್ಕೋ ಹಿ ಬಹರ್ ರಖಾ ಜಿಸ್ನೆ ಇನ್ಕೋ ಮಾಲ್ ದಿಯಾ, ಇತ್ನಾ ಲಾಲಾಚ್, ಇತ್ನಾ ನಫ್ರತ್, ಭ್ರಷ್ಟಾಚಾರಿ ಸೆ ಮೊಹಬ್ಬತ್ʼ ಎಂಬುದು ನಿಂದನೆ ಎಂದಿರುವ ಆಯೋಗ, ʻಸಾಬೀತಾಗದ ಸತ್ಯಗಳ ಆಧಾರದ ಮೇಲೆ ಆಡಳಿತ ಪಕ್ಷದ ಟೀಕೆ ಮತ್ತು ನ್ಯಾಯಾಂಗದ ಮೇಲೆ ದೋಷಾರೋಪ ಹೊರಿಸುತ್ತದೆ' ಎಂದು ಎಎಪಿಗೆ ತಮ್ಮ ಪತ್ರದಲ್ಲಿ ಇಸಿ ಹೇಳಿದೆ. 'ಗುಂಡೋ ವಾಲಿ ಪಾರ್ಟಿ ಚೋಡೋ' ಎಂಬುದನ್ನು ಇತರ ರಾಜಕೀಯ ಪಕ್ಷದ ನಾಯಕರ ಚಿತ್ರ ಮತ್ತು ಪಕ್ಷದ ಚಿಹ್ನೆಯೊಂದಿಗೆ ತೋರಿಸುವುದು 'ಇತರ ಪಕ್ಷಗಳು ಮತ್ತು ಅವರ ನಾಯಕರ ದೂಷಣೆ' ಎಂದು ಇಸಿ ಹೇಳಿದೆ.

ಎಎಪಿ ತಿರುಗೇಟು: 'ಜೈಲ್ ಕಾ ಜವಾಬ್ ವೋಟ್ ಸೆ ದೇಂಗೆ' ಹಾಡು ಆಡಳಿತ ಪಕ್ಷ (ಬಿಜೆಪಿ) ಮತ್ತು ತನಿಖಾ ಸಂಸ್ಥೆಗಳನ್ನು ಕೆಟ್ಟ ಬೆಳಕಿನಲ್ಲಿ ತೋರಿಸುತ್ತದೆ' ಎಂಬ ಚುನಾವಣೆ ಆಯೋಗದ ಹೇಳಿಕೆಯನ್ನು ಎಎಪಿ ನಾಯಕಿ ಅತಿಶಿ ಟೀಕಿಸಿದ್ದಾರೆ. ʻಹಾಡಿನುದ್ದಕ್ಕೂ ಎಲ್ಲಿಯೂ ಬಿಜೆಪಿ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಸರ್ವಾಧಿಕಾರದ ಬಗ್ಗೆ ಮಾತನಾಡಿದರೆ, ಇದು ಆಡಳಿತ ಪಕ್ಷದ ಟೀಕೆ ಎಂದು ಚುನಾವಣೆ ಆಯೋಗ ಹೇಳುತ್ತದೆ. ಅಂದರೆ, ಬಿಜೆಪಿ ಸರ್ವಾಧಿಕಾರಿ ಎಂದು ಚುನಾವಣೆ ಆಯೋಗ ನಂಬಿದೆʼ ಎಂದು ಅವರು ಹೇಳಿದರು. ʻತಮ್ಮ ಪಕ್ಷ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ ಪ್ರತಿದಿನ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿ ಸುತ್ತಿದೆ. ಪ್ರತಿಪಕ್ಷಗಳ ಚುನಾವಣೆ ಪ್ರಚಾರವನ್ನು ಸ್ಥಗಿತಗೊಳಿಸುವ ಕೆಲಸವನ್ನು ಆಯೋಗ ನಿಲ್ಲಿಸಬೇಕಿದೆʼ ಎಂದು ಮನವಿ ಮಾಡಿದರು.

ʻ2024 ರ ಚುನಾವಣೆಯು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿದ ಚುನಾವಣೆ ಎಂದು ಮುಂದೆ ನೆನಪಿಸಿಕೊಳ್ಳಬಾರದು ಎಂದು ಹಾರೈಸುತ್ತೇನೆ. ಚುನಾವಣೆ ಆಯೋಗ ತಟಸ್ಥವಾಗಿಲ್ಲ: ಅದು ಬಿಜೆಪಿಯ ರಾಜಕೀಯ ಅಸ್ತ್ರವಾಗಿದೆʼ ಎಂದು ಅತಿಶಿ ಹೇಳಿದರು.

Read More
Next Story