ಮೂವರು ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್:‌ ಹರ್ಯಾಣ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿತ
x

ಮೂವರು ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್:‌ ಹರ್ಯಾಣ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿತ


ಚಂಡೀಗಢ, ಮೇ 7: ಹರ್ಯಾಣದ ಬಿಜೆಪಿ ಸರ್ಕಾರಕ್ಕೆ ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದಿದ್ದು, ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ನಯಾಬ್ ಸಿಂಗ್ ಸೈನಿ ಸರ್ಕಾರ ಬಹುಮತ ಕಳೆದುಕೊಂಡಿದೆ.

90 ಶಾಸಕರ ಬಲ ಇರುವ ವಿಧಾನಸಭೆಯ ಬಲ ಇಬ್ಬರು ಶಾಸಕರ ರಾಜೀನಾಮೆಯಿಂದ 88ಕ್ಕೆ ಕುಸಿದಿದೆ. ಬಿಜೆಪಿ 40, ಕಾಂಗ್ರೆಸ್ 30 ಮತ್ತು ಜೆಜೆಪಿ 10 ಶಾಸಕರನ್ನು ಹೊಂದಿದೆ. ಸರ್ಕಾರಕ್ಕೆ ಈಗ ಬಹುಮತಕ್ಕೆ ಇಬ್ಬರು ಶಾಸಕರು ಅಗತ್ಯವಿದೆ. ಮಾರ್ಚ್‌ನಲ್ಲಿ ಜೆಜೆಪಿ ಸಮ್ಮಿಶ್ರ ಸರ್ಕಾರದಿಂದ ಹೊರಬಂದಿದೆ. ಆದರೆ, ಜನನಾಯಕ ಜನತಾ ಪಕ್ಷದ ಕೆಲವು ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದರು.

ರೋಹ್ಟಕ್‌ನಲ್ಲಿ ಪ್ರತಿಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಂತ್ರ ಶಾಸಕರಾದ ಸೋಂಬಿರ್ ಸಾಂಗ್ವಾನ್ (ದಾದ್ರಿ), ರಣಧೀರ್ ಸಿಂಗ್ ಗೊಲ್ಲೆನ್ (ಪುಂಡ್ರಿ) ಮತ್ತು ಧರಂಪಾಲ್ ಗೊಂಡರ್ (ನಿಲೋಖೇರಿ) ತಮ್ಮ ನಿರ್ಧಾರ ಪ್ರಕಟಿಸಿದರು.

ʻಸರ್ಕಾರ ರಾಜೀನಾಮೆ ನೀಡಬೇಕು.ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ, ಚುನಾವಣೆ ನಡೆಸಬೇಕು.ಇದು ಜನವಿರೋಧಿ ಸರ್ಕಾರ. ಹರ್ಯಾಣ ಸೇರಿದಂತೆ ದೇಶದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಮತ್ತು ಸ್ವತಂತ್ರ ಶಾಸಕರು ಜನರ ಭಾವನೆಗಳನ್ನು ಗೌರವಿಸಿ ಈ ನಿರ್ಧಾರ ಕೈಗೊಂಡಿದ್ದಾರೆʼ ಎಂದು ಹೂಡಾ ಹೇಳಿದರು.

ʻಮೂವರು ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿರುವುದಾಗಿ ರಾಜ್ಯಪಾಲರಿಗೆ ಪತ್ರ ಕಳುಹಿಸಿದ್ದಾರೆʼ ಎಂದು ಕಾಂಗ್ರೆಸ್ ಹೇಳಿದೆ.

ಉದಯ್ ಭಾನ್ ಮಾತನಾಡಿ, ʻಮೂವರು ಸ್ವತಂತ್ರ ಶಾಸಕರು ಕಾಂಗ್ರೆಸ್‌ಗೆ ತಮ್ಮ ಬೆಂಬಲ ನೀಡಿದ್ದಾರೆ.ಬಿಜೆಪಿ ಸರ್ಕಾರಕ್ಕೆ ಈ ಹಿಂದೆ 10 ಜೆಜೆಪಿ ಶಾಸಕರು ಮತ್ತು ಪಕ್ಷೇತರರ ಬೆಂಬಲವಿತ್ತು. ಜೆಜೆಪಿ ಕೂಡ ಬೆಂಬಲ ಹಿಂತೆಗೆದುಕೊಂಡಿದೆ. ನಯಾಬ್ ಸಿಂಗ್ ಸೈನಿ ಸರ್ಕಾರ ಈಗ ಅಲ್ಪಮತದ ಸರ್ಕಾರವಾಗಿದೆ. ಸೈನಿ ಅವರಿಗೆ ಒಂದು ನಿಮಿಷವೂ ಉಳಿಯಲು ಹಕ್ಕಿಲ್ಲದ ಕಾರಣ ರಾಜೀನಾಮೆ ನೀಡಬೇಕುʼ ಎಂದು ಹೇಳಿದರು.

ಗೊಲ್ಲೆನ್‌ ಮಾತನಾಡಿ,ʻನಿರುದ್ಯೋಗ ಉತ್ತುಂಗದಲ್ಲಿದೆ. ಹಣದುಬ್ಬರ ಮತ್ತು ರೈತರ ಸಮಸ್ಯೆಗಳು ಇವೆ, ಸಮಾಜದ ಎಲ್ಲಾ ವರ್ಗಗಳು ಬೇಸರಗೊಂಡಿವೆ. ಪರಿವಾರ್ ಪೆಹಚಾನ್ ಪತ್ರ (ಕುಟುಂಬ ಗುರುತಿನ ಚೀಟಿ) ಮತ್ತು ಆಸ್ತಿ ಐಡಿ ವ್ಯವಸ್ಥೆಯಿಂದ ಜನರು ಅಪಾರ ಸಂಕಷ್ಟ ಎದುರಿಸುತ್ತಿದ್ದಾರೆ,ʼ ಎಂದರು.

ಸಾಂಗ್ವಾನ್ ಮಾತನಾಡಿ, ʻರೈತರ ಆಂದೋಲನದ ಸಮಯದಲ್ಲಿ ನಾವು ಅವರ (ಬಿಜೆಪಿ ಸರ್ಕಾರದ) ತಪ್ಪು ನೀತಿಗಳನ್ನು ವಿರೋಧಿಸಿದೆವು. ಶಾಲೆಗಳಲ್ಲಿ ಅಸಮರ್ಪಕ ಸಿಬ್ಬಂದಿಯಂತಹ ಸಮಸ್ಯೆಗಳನ್ನು ಸಹ ಪ್ರಸ್ತಾಪಿಸಿದೆ. ರಾಜ್ಯದ ಎಲ್ಲಾ 10 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌ಗೆ ನಾವು ಬೆಂಬಲ ನೀಡುತ್ತೇವೆʼ ಎಂದರು.

ಹರ್ಯಾಣದಲ್ಲಿ ಸೈನಿ ನೇತೃತ್ವದ ಬಿಜೆಪಿ ಸರ್ಕಾರವು ಮಾರ್ಚ್ 13 ರಂದು ಮನೋಹರ್ ಲಾಲ್ ಖಟ್ಟರ್ ಅವರ ಬದಲು ಆಡಳಿತಕ್ಕೆ ಬಂದಿತು. ಕರ್ನಾಲ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಖಟ್ಟರ್ ಅವರು ಕರ್ನಾಲ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾನಿಯಾದಿಂದ ಆಯ್ಕೆಯಾಗಿದ್ದ ಸ್ವತಂತ್ರ ಶಾಸಕ, ಹರಿಯಾಣದ ಮಾಜಿ ಸಚಿವ ರಂಜಿತ್ ಸಿಂಗ್ ಚೌತಾಲಾ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರು. ಮಾರ್ಚ್ 24 ರಂದು ಹಿಸ್ಸಾರ್ ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡು, ರಾಜೀನಾಮೆ ನೀಡಿದರು.

ಹರಿಯಾಣದಲ್ಲಿ ಅಕ್ಟೋಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

Read More
Next Story