ಗುಕೇಶ್ ಗೆ ಅದ್ದೂರಿ ಸ್ವಾಗತ
ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್‌ನಲ್ಲಿ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಆಟಗಾರ
ಚೆನ್ನೈ, ಏ 25- ಟೊರೊಂಟೊದಲ್ಲಿ ನಡೆದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್‌ನಲ್ಲಿ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೆ ಪಾತ್ರವಾದ ಗ್ರ್ಯಾಂಡ್‌ಮಾಸ್ಟರ್ ಡಿ. ಗುಕೇಶ್ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
17 ವರ್ಷದ ಚೆಸ್ ಪ್ರತಿಭೆಯನ್ನು ಸ್ವಾಗತಿಸಲು, ಗುಕೇಶ್ ಓದುತ್ತಿರುವ ವೇಲಮ್ಮಾಳ್ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ವಿಮಾನ ಆಗಮನಕ್ಕೆ ಕನಿಷ್ಠ ಒಂದು ಗಂಟೆ ಮೊದಲು ವಿಮಾನ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿದ್ದರು. ಆಗಮನ ಗೇಟ್‌ನ ಸುತ್ತಲಿನ ಪ್ರದೇಶವು ಕಿಕ್ಕಿರಿದು ತುಂಬಿತ್ತು.
ಬೆಳಗಿನ ಜಾವ ಸುಮಾರು 3 ಗಂಟೆಗೆ ಗುಕೇಶ್ ಆಗಮಿಸಿದರು. ಸಮೂಹದ ಹರ್ಷೋದ್ಗಾರದ ನಡುವೆ ಅವರನ್ನುಸುರಕ್ಷಿತವಾಗಿ ಹೊರತರಲು ಪೊಲೀಸರು ಹರಸಾಹಸ ಪಟ್ಟರು.
ʻಮನೆಗೆ ಬಂದಿರುವುದರಿಂದ ಬಹಳ ಸಂತೋಷವಾಗಿದೆ. ಇದೊಂದು ವಿಶೇಷ ಸಾಧನೆ. ಪಂದ್ಯಾವಳಿಯ ಆರಂಭದಿಂದಲೂ ಉತ್ತಮ ಸ್ಥಾನ ದಲ್ಲಿದ್ದೆ. ಪಂದ್ಯಾವಳಿಯಲ್ಲಿ ಅಗ್ರ ಸ್ಥಾನದಲ್ಲಿ ಹೊರಹೊಮ್ಮುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ಹೊಂದಿದ್ದೆ ಮತ್ತು ಅದೃಷ್ಟವೂ ನನ್ನ ಕಡೆಗಿತ್ತುʼ ಎಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಹೇಳಿದರು.
ʻಸಾಕಷ್ಟು ಜನರು ಚೆಸ್ ಆಟ ಇಷ್ಟಪಡುತ್ತಿದ್ದು,ಸಂತೋಷವಾಗುತ್ತಿದೆ. ತಮಿಳುನಾಡು ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ನನ್ನ ಜೊತೆಯಲ್ಲಿದ್ದು ನನ್ನ ಗೆಲುವಿನಲ್ಲಿ ಅದ್ಭುತ ಪಾತ್ರ ವಹಿಸಿದ ತಂದೆ, ತಾಯಿ, ಕೋಚ್, ಸ್ನೇಹಿತರು, ಕುಟುಂಬ, ಪ್ರಾಯೋಜಕರು ಮತ್ತು ಶಾಲೆಗೆ ಧನ್ಯವಾದಗಳು,ʼ ಎಂದರು.
ಸೂಕ್ಷ್ಮಜೀವಿಶಾಸ್ತ್ರಜ್ಞೆಯಾಗಿರುವ ಅವರ ತಾಯಿ ಪದ್ಮಾ ಮತ್ತು ಕುಟುಂಬದ ಇತರ ಸದಸ್ಯರು ಬರಮಾಡಿಕೊಳ್ಳಲು ಆಗಮಿಸಿದ್ದರು. ಕುಟುಂಬದವರನ್ನು ಗುರುತಿಸಿದ ಗುಕೇಶ್ ಮುಖದಲ್ಲಿ ದೊಡ್ಡ ನಗು ಇತ್ತು. ಪರಸ್ಪರ ಶುಭಾಶಯ ಕೋರಿದ ನಂತರ ಆಲಿಂಗನ ವಿನಿಮಯ ಮಾಡಿಕೊಂಡರು. ಗುಕೇಶ್ ಅವರ ತಂದೆ ರಜನಿಕಾಂತ್, ಇಎನ್‌ಟಿ ಶಸ್ತ್ರಚಿಕಿತ್ಸಕ. ಮಗನೊಂದಿಗೆ ಟೊರೊಂಟೊಗೆ ತೆರಳಿದ್ದರು.
ಮೊದಲ ಭಾರತೀಯ ಎಂಬ ಖ್ಯಾತಿ: ವಿಶ್ವನಾಥನ್ ಆನಂದ್ ಅವರ ಬಳಿಕ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದ ಮೊದಲ ಭಾರತೀಯ ಗುಕೇಶ್. 40 ವರ್ಷಗಳ ಹಿಂದೆ ಚೆಸ್ ದಂತಕಥೆ ಗ್ಯಾರಿ ಕಾಸ್ಪರೋವ್ ರಚಿಸಿದ ದಾಖಲೆಯನ್ನು ಉತ್ತಮಗೊಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಗುಕೇಶ್ ಸೆಣೆಸಲಿದ್ದಾರೆ.
ಕಾಸ್ಪರೋವ್ ಅವರು ʻಟೊರೊಂಟೊದಲ್ಲಿ ಭಾರತೀಯ ಭೂಕಂಪʼ ಎಂದು ಶ್ಲಾಘಿಸಿದ್ದಾರೆ. ಕ್ಯಾಂಡಿಡೇಟ್ಸ್‌ನಲ್ಲಿ ಗುಕೇಶ್ ಸೋಲಿಸಿದ ಆಟಗಾರರಲ್ಲಿ 18 ವರ್ಷ ವಯಸ್ಸಿನ ಆರ್ ಪ್ರಗ್ನಾನಂದ ಒಬ್ಬರು. ಈತ ಕೂಡ ಚೆನ್ನೈ ಪ್ರತಿಭೆ. ಗುಕೇಶ್ ಜನವರಿ 2019 ರಲ್ಲಿ 12 ವರ್ಷ, ಏಳು ತಿಂಗಳು ಮತ್ತು 17 ದಿನ ಆಗಿದ್ದಾಗ ದೇಶದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆದರು. ಪ್ರಸ್ತುತ 2743 ಫೈಡ್ ರೇಟಿಂಗ್ ಹೊಂದಿದ್ದಾರೆ.
ಫೈಡ್ ಶ್ರೇಯಾಂಕದಲ್ಲಿ 16 ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು.