
ಗಾಂಧೀಜಿಯನ್ನು 'ಕಪಟಿ' ಎಂದ ಕಾಂಗ್ರೆಸ್ ನಾಯಕ; ವಿವಾದ ಸೃಷ್ಟಿ
ರಾಜ್‌ಕೋಟ್, ಮೇ 3- ಗುಜರಾತಿನ ಕಾಂಗ್ರೆಸ್ ಮಾಜಿ ಶಾಸಕ ಇಂದ್ರನೀಲ್ ರಾಜ್‌ಗುರು, ಗಾಂಧೀಜಿ ಅವರಿಗೆ ʻಕಪಟಿʼ ಎಂಬ ಪದ ಬಳಸಿ ವಿವಾದವನ್ನು ಸೃಷ್ಟಿಸಿದ್ದಾರೆ.
ಮೇ 1 ರಂದು ಇಲ್ಲಿನ ದೂಧ್‌ಸಾಗರ್ ರಸ್ತೆಯಲ್ಲಿ ನಡೆದ ಸಭೆಯಲ್ಲಿ ರಾಜ್‌ಗುರು ಆಡಿದ ಮಾತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ʻಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುದ್ಧ ಹೃದಯ ಮತ್ತು ಪ್ರಾಮಾಣಿಕರು. ಜನರು ಮುಂದಿನ ಮಹಾತ್ಮರನ್ನು ಅವರಲ್ಲಿ ಕಾಣುತ್ತಾರೆʼ ಎಂದು ಹೇಳಿದರು.
ʻಗಾಂಧೀಜಿ ಸ್ವಲ್ಪಮಟ್ಟಿಗೆ ಕಪಟಿ. ಆದರೆ, ರಾಹುಲ್ ಗಾಂಧಿ ಸಂಪೂರ್ಣವಾಗಿ ಪ್ರಾಮಾಣಿಕ ಮತ್ತು ಶುದ್ಧ ಹೃದಯಿ. ರಾಹುಲ್ ಗಾಂಧಿಯನ್ನು ʻಪಪ್ಪುʼ ಎಂದು ಬಿಂಬಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ದೇಶ ಅವರನ್ನು ತನ್ನ ನಾಯಕ ಎಂದು ಒಪ್ಪಿಕೊಂಡಿದೆʼ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ರಾಜ್ ಗುರು ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ʻಮಹಾತ್ಮರ ಬಗ್ಗೆ ಇಂತಹ ಹೇಳಿಕೆ ನೀಡಿರುವ ಕಾಂಗ್ರೆಸ್ ನ್ನು ಜನರು ಕ್ಷಮಿಸುವುದಿಲ್ಲʼ ಎಂದು ಗುಜರಾತ್ ಬಿಜೆಪಿ ಉಪಾಧ್ಯಕ್ಷ ಭರತ್ ಬೊಘರಾ ಹೇಳಿದ್ದಾರೆ.
ತಾವು ಗಾಂಧೀಜಿಯನ್ನು ʻಬುದ್ಧಿವಂತʼ ಎಂದು ಹೇಳಲು ಬಯಸಿದ್ದೆ ಎಂದು ರಾಜಗುರು ಸಮರ್ಥಿಸಿಕೊಂಡಿದ್ದಾರೆ. ಆದರೆ, ಗುಜರಾತ್ ಬಿಜೆಪಿ ಉಪಾಧ್ಯಕ್ಷ ಭರತ್ ಬೊಘರಾ, ʻಮಹಾತ್ಮ ಗಾಂಧಿ ವಿರುದ್ಧದ ಇಂತಹ ಹೇಳಿಕೆ ನೀಡುವ ಕಾಂಗ್ರೆಸ್ ಅನ್ನು ಜನರು ಕ್ಷಮಿಸುವುದಿಲ್ಲʼ ಎಂದು ವಾಗ್ದಾಳಿ ನಡೆಸಿದ್ದಾರೆ.
ʻಗಾಂಧೀಜಿ ರಾಷ್ಟ್ರಪಿತ ಮತ್ತು ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು. ದೇಶ ಮತ್ತು ಗುಜರಾತಿನ ಜನರು ಇಂತಹ ಹೇಳಿಕೆಗಳನ್ನು ಕ್ಷಮಿಸುವುದಿಲ್ಲ. ಈ ಕೋಪ ಚುನಾವಣೆ ಫಲಿತಾಂಶಗಳಲ್ಲಿ ಪ್ರತಿಫಲಿಸಲಿದೆ,ʼ ಎಂದು ಹೇಳಿದರು.
ಇತಿಹಾಸ ಪುಸ್ತಕದಲ್ಲಿದೆ: ಮಾಧ್ಯಮದವರು ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ರಾಜಗುರು,ʻತಾವು ಹೇಳಿದ್ದು ಇತಿಹಾಸ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆʼ ಎಂದರು. ʻಬಿಜೆಪಿಯವರು ಬ್ರಿಟಿಷರಂತೆ ಕೆಲಸ ಮಾಡುತ್ತಿದ್ದು, ಪ್ರಜಾಪ್ರಭುತ್ವವನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿರುವುದು ರಾಹುಲ್ ಗಾಂಧಿ ಮಾತ್ರ. ನಾನು ಗಾಂಧೀಜಿಗೆ ಸಂಬಂಧಿಸಿದ ಅನೇಕ ಇತಿಹಾಸ ಪುಸ್ತಕಗಳನ್ನು ಓದಿದ್ದೇನೆ ಮತ್ತು ಅಂತಹ ಒಂದು ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ,ʼ ಎಂದು ಹೇಳಿದರು.