
ಸೂರತ್ ಲೋಕಸಭೆ ಕ್ಷೇತ್ರ: ಅವಿರೋಧವಾಗಿ ಬಿಜೆಪಿಗೆ
ಗುಜರಾತ್‌ನ ಸೂರತ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಸೂರತ್ ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಮತ್ತು ಕಲೆಕ್ಟರ್ ಸೌರಭ್ ಪರ್ಘಿ ಅವರು ಮೂವರು ಪ್ರತಿಪಾದಕರು ಸಲ್ಲಿಸಿದ ದಾಖಲೆಗಳಲ್ಲಿನ ಸಹಿ ಮತ್ತು ಕುಂಭಾಣಿ ಅವರ ನಾಮಪತ್ರವನ್ನು ಬೆಂಬಲಿಸಿ ಸಲ್ಲಿಸಿದ ದಾಖಲೆಗಳಲ್ಲಿನ ಸಹಿಯನ್ನು ಪರಿಶೀಲಿಸಿದಾಗ, ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು.
ಕುತೂಹಲಕರ ಅಂಶವೆಂದರೆ, ಚುನಾವಣೆ ಕಣದಲ್ಲಿರುವ ಎಲ್ಲಾ ಎಂಟು ಸ್ವತಂತ್ರ ಅಭ್ಯರ್ಥಿಗಳು ಕೂಡ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇದರಿಂದ ಬಿಜೆಪಿಯ ಮುಖೇಶ್ ದಲಾಲ್, ಸೂರತ್ ಸಂಸದರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ವಿಚಾರ ವಿವಾದಕ್ಕೆ ತಿರುಗಿದ್ದು, ಇದರಲ್ಲಿ ಬಿಜೆಪಿ ಪಾತ್ರವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ಕೋಟೆ ಎಂದು ಹೇಳಲಾದ ಈ ಕ್ಷೇತ್ರದ ಚುನಾವಣೆಗೆ ತಡೆ ಕೋರಿ, ಕಾಂಗ್ರೆಸ್ ಗುಜರಾತ್ ಹೈಕೋರ್ಟ್‌ನ ಮೊರೆ ಹೋಗಬಹುದು ಎಂದು ಮಾಧ್ಯಮ ವರದಿಗಳು ಹೇಳಿವೆ. ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಶಕ್ತಿ ಸಿನ್ಹ್ ಗೋಹಿಲ್ ಅವರು ಚುನಾವಣಾ ಆಯೋಗಕ್ಕೆ ಸೂ ಮೋಟೋ ಪರಾಮರ್ಶೆಗೆ ಮನವಿ ಮಾಡಿದ್ದಾರೆ.