ಉಚಿತ, ನ್ಯಾಯಸಮ್ಮತ ಚುನಾವಣೆಗೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಿ: ಸುಪ್ರೀಂ
x

ಉಚಿತ, ನ್ಯಾಯಸಮ್ಮತ ಚುನಾವಣೆಗೆ ತೆಗೆದುಕೊಂಡ ಕ್ರಮಗಳನ್ನು ವಿವರಿಸಿ: ಸುಪ್ರೀಂ

ಪೇಪರ್‌ ಬ್ಯಾಲೆಟ್ ವ್ಯವಸ್ಥೆಗೆ ಮರಳಬೇಕೆಂಬ ಅರ್ಜಿದಾರರ ಕೋರಿಕೆ ʻಹಿಮ್ಮುಖ ಸಲಹೆʼ:ಚುನಾವಣೆ ಆಯೋಗ


ಏಪ್ರಿಲ್‌ 18- ಚುನಾವಣೆ ಆಯೋಗವು ಇವಿಎಂ- ಕಾಗದದ ಚೀಟಿ ಒಳಗೊಂಡ ವಿವಿಪ್ಯಾಟ್ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿರುವುದರಿಂದ, ಚುನಾವಣೆ ಪ್ರಕ್ರಿಯೆಯ ಪಾವಿತ್ರ್ಯವನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ʻಇದು ಚುನಾವಣೆ ಪ್ರಕ್ರಿಯೆ. ಪಾವಿತ್ರ್ಯ ಇರಬೇಕು. ಅನಿರೀಕ್ಷಿತವಾದುದನ್ನು ಮಾಡಲಾಗುತ್ತಿದೆ ಎಂಬ ಆತಂಕ ಯಾರಿಗೂ ಬೇಡ,ʼ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಹೇಳಿದರು. ಮುಕ್ತ ಮತ್ತು ನ್ಯಾಯಸಮ್ಮತ ಮತ ಚಲಾವಣೆಯನ್ನು ಖಚಿತಪಡಿಸಿಕೊಳ್ಳಲು ಅನುಸರಿಸಿದ ಕ್ರಮಗಳನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್, ಚುನಾವಣೆ ಆಯೋಗವನ್ನು ಕೇಳಿದೆ.

ವಿವಿಪ್ಯಾಟ್ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್)ನ ಕಾಗದದ ಚೀಟಿಗಳನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ (ಇವಿಎಂ)ನಲ್ಲಿ ಚಲಾವಣೆಯಾದ ಮತಗಳ ಅಡ್ಡ ಪರಿಶೀಲನೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಮತದಾರರಿಗೆ ವಿವಿಪ್ಯಾಟ್ ಚೀಟಿ ಕೊಡಿ: ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಷಾ, ʻಮತ ಚಲಾವಣೆ ಬಳಿಕ ವಿವಿಪ್ಯಾಟ್ ಚೀಟಿ ತೆಗೆದುಕೊಂಡು ಮತಪೆಟ್ಟಿಗೆಗೆ ಹಾಕಲು ಅವಕಾಶ ನೀಡಬೇಕುʼ ಎಂದು ಒತ್ತಾಯಿಸಿದರು. ʻಇದು ಮತದಾರರ ಗೌಪ್ಯತೆ ಮೇಲೆ ಪರಿಣಾಮ ಬೀರುತ್ತದೆಯೇ?ʼ ಎಂಬ ನ್ಯಾಯಮೂರ್ತಿ ಖನ್ನಾ ಅವರ ಪ್ರಶ್ನೆಗೆ ಪಾಷಾ,ʻಮತದಾರರ ಹಕ್ಕುಗಳನ್ನು ಬಳಸಿಕೊಂಡು ಖಾಸಗಿತನಕ್ಕೆ ಧಕ್ಕೆ ತರಬಾರದುʼ ಎಂದು ಹೇಳಿದರು.

ವಕೀಲ ಪ್ರಶಾಂತ್ ಭೂಷಣ್ ಮಾತನಾಡಿ,ʻವಿವಿ ಪ್ಯಾಟ್‌ ಯಂತ್ರದ ಮೇಲಿನ ಬೆಳಕು ಈಗ ಕೇವಲ ಏಳು ಸೆಕೆಂಡ್‌ ಇರುತ್ತದೆ. ಅದು ನಿರಂತರವಾಗಿ ಇರುವಂತೆ ಮಾಡಬೇಕು. ಇದರಿಂದ ಮತದಾರರು ತಮ್ಮ ಕಾಗದದ ಚೀಟಿಗಳು ಪೆಟ್ಟಿಗೆಯಲ್ಲಿ ಬೀಳುವುದನ್ನು ನೋಡಬಹುದುʼ ಎಂದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ʻಮತ ಎಣಿಕೆ ಪ್ರಕ್ರಿಯೆಗೆ ವಿಶ್ವಾಸಾರ್ಹತೆ ನೀಡಲು ವಿವಿಪ್ಯಾಟ್ ಚೀಟಿಗಳ ಪ್ರತ್ಯೇಕ ಲೆಕ್ಕ ಮಾಡಬೇಕುʼ ಎಂದರು.

ಇವಿಎಂ, ವಿವಿಪ್ಯಾಟ್ ಘಟಕ: ಕೇರಳದಲ್ಲಿ ಬಿಜೆಪಿಗೆ ಹೆಚ್ಚುವರಿ ಮತಗಳು ದಾಖಲಾಗಿರುವುದನ್ನು ಭೂಷಣ್ ಉಲ್ಲೇಖಿಸಿದಾಗ, ಈ ವರದಿ ಸಂಪೂರ್ಣ ಸುಳ್ಳು ಎಂದು ಆಯೋಗ ಹೇಳಿತು. ಇವಿಎಂನ ನಿಯಂತ್ರಣ ಘಟಕವು ಕಾಗದದ ಚೀಟಿಯನ್ನು ಮುದ್ರಿಸಲು ವಿವಿಪ್ಯಾಟ್ ಘಟಕಕ್ಕೆ ಆದೇಶಿಸುತ್ತದೆ. ಪೆಟ್ಟಿಗೆಯಲ್ಲಿ ಬೀಳುವ ಮೊದಲು ಈ ಚೀಟಿ ಮತದಾರರಿಗೆ ಏಳು ಸೆಕೆಂಡ್‌ ಕಾಲ ಗೋಚರಿಸುತ್ತದೆ. ಇಂಜಿನಿಯರ್‌ಗಳ ಸಮ್ಮುಖದಲ್ಲಿ ಮತದಾನ ಆರಂಭಕ್ಕೂ ಮುನ್ನ ಯಂತ್ರಗಳನ್ನು ಪರಿಶೀಲಿಸಲಾಗುತ್ತದೆʼ ಎಂದು ಆಯೋಗ ಹೇಳಿದೆ.

'ವಿವಿ ಪ್ಯಾಟ್‌ ಪ್ರಿಂಟರ್‌ನಲ್ಲಿ ಸಾಫ್ಟ್‌ವೇರ್ ಇಲ್ಲ': ʻವಿವಿಪ್ಯಾಟ್‌ ಪ್ರಿಂಟರ್‌ನಲ್ಲಿ ಯಾವುದೇ ಸಾಫ್ಟ್‌ವೇರ್ ಇಲ್ಲ. ಪ್ರತಿಯೊಂದು ವಿವಿಪ್ಯಾಟ್‌ ಯಂತ್ರದಲ್ಲಿ ಚಿಹ್ನೆಗಳನ್ನು ಸಂಗ್ರಹಿಸುವ 4 ಮೆಗಾಬೈಟ್ ಫ್ಲ್ಯಾಷ್ ಮೆಮೊರಿ ಇದೆ. ಚುನಾವಣಾಧಿಕಾರಿ ಎಲೆಕ್ಟ್ರಾನಿಕ್ ಮತಯಂತ್ರವನ್ನು ಸಿದ್ಧಪಡಿಸುತ್ತಾರೆ. ಬಳಿಕ ಅದನ್ನು ಚಿಹ್ನೆ ಲೋಡಿಂಗ್ ಘಟಕಕ್ಕೆ ಲೋಡ್ ಮಾಡಲಾಗುತ್ತದೆ. ಇದು ಸರಣಿ ಸಂಖ್ಯೆ, ಅಭ್ಯರ್ಥಿ ಹೆಸರು ಮತ್ತು ಚಿಹ್ನೆಯನ್ನು ನೀಡುತ್ತದೆ. ಯಾವುದನ್ನೂ ಮೊದಲೇ ಲೋಡ್ ಮಾಡಲಾಗಿರುವುದಿಲ್ಲ. ಇದು ದತ್ತಾಂಶ ಅಲ್ಲ. ಅದರ ಪ್ರತಿಬಿಂಬʼ ಎಂದು ಹೇಳಿದೆ.

ʻತಿದ್ದುವಿಕೆ ತಡೆಯಲು ಘಟಕವನ್ನು ಸೀಲ್ ಮಾಡಲಾಗಿದೆಯೇʼ ಎಂದು ಕೇಳಿದಾಗ, ʻಅಂತಹ ಯಾವುದೇ ಪ್ರಕ್ರಿಯೆ ಈಗ ಜಾರಿಯಲ್ಲಿಲ್ಲʼ ಎಂದು ಒಪ್ಪಿಕೊಂಡಿತು.

ಅಣಕು ಮತದಾನ: ಎಲ್ಲ ಮತ ಯಂತ್ರಗಳು ಅಣಕು ಮತದಾನ ಪ್ರಕ್ರಿಯೆ ಮೂಲಕ ಹಾದುಹೋಗುತ್ತವೆ. ಶೇ.5ರಷ್ಟು ಇವಿಎಂಗಳನ್ನು ಆರಿಸಲಾಗುತ್ತದೆ. ಮತದಾನದ ದಿನದಂದು ಪ್ರಕ್ರಿಯೆ ಪುನರಾವರ್ತನೆಯಾಗುತ್ತದೆ. ವಿವಿಪ್ಯಾಟ್‌ ಚೀಟಿಗಳನ್ನು ಹೊರತೆಗೆದು, ಎಣಿಕೆ ಮತ್ತು ಹೊಂದಾಣಿಕೆ ಮಾಡಲಾಗುತ್ತದೆ. ಎಲ್ಲ ಯಂತ್ರಗಳು ಕಾಗದದ ಮುದ್ರೆಗಳನ್ನು ಹೊಂದಿರುತ್ತವೆ. ಎಣಿಕೆಗೆ ಯಂತ್ರ ಬಂದಾಗ, ಸೀಲ್ ಸಂಖ್ಯೆಯನ್ನು ಪರಿಶೀಲಿಸಬಹುದುʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಗದದ ಚೀಟಿ ನೀಡಿದರೆ ಗೌಪ್ಯತೆಗೆ ಧಕ್ಕೆ: ʻ ಮತದಾರರಿಗೆ ಕಾಗದದ ಚೀಟಿ ನೀಡುವುದರಿಂದ ಗೌಪ್ಯತೆಗೆ ಧಕ್ಕೆಯಾಗುತ್ತದೆ ಮತ್ತು ಮತಗಟ್ಟೆ ಹೊರಗೆ ದುರ್ಬಳಕೆಯಾಗಬಹುದುʼ ಎಂದು ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ.

ʻಈ ವಿಚಾರ ನಂಬಿಕೆಗೆ ಸಂಬಂಧಿಸಿದ್ದುʼ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ʻಮರೆಮಾಚುವಂಥದ್ದುಏನೂ ಇಲ್ಲ,ʼ ಆಯೋಗದ ಅಧಿಕಾರಿ ಹೇಳಿದರು.

ಬ್ಯಾಲೆಟ್ ಪೇಪರ್‌ ಸಾಧ್ಯವಿಲ್ಲ: ಪೇಪರ್‌ ಬ್ಯಾಲೆಟ್ ವ್ಯವಸ್ಥೆಗೆ ಮರಳಬೇಕೆಂಬ ಅರ್ಜಿದಾರರ ಕೋರಿಕೆ ʻಹಿಮ್ಮುಖ ಸಲಹೆʼ ಎಂದು ಆಯೋಗದ ವಕೀಲರು ಹೇಳಿದರು. ʻಮತಗಟ್ಟೆ ಅಧಿಕಾರಿಯ ದುರ್ನಡತೆಗಾಗಿ 500 ರೂ.ದಂಡ ಕಡಿಮೆʼ ಎಂದು ನ್ಯಾಯಾಲಯ ಹೇಳಿದೆ.

Read More
Next Story