
ಸಿಸೋಡಿಯಾ ಜಾಮೀನು ಅರ್ಜಿ: ಸಿಬಿಐ, ಇಡಿ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
ನವದೆಹಲಿ, ಮೇ 3- ಜಾಮೀನು ಕೋರಿ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿರುವ ಮನವಿಗಳ ಕುರಿತು ಹೈಕೋರ್ಟ್, ಸಿಬಿಐ ಮತ್ತು ಇಡಿಯಿಂದ ಶುಕ್ರವಾರ ಪ್ರತಿಕ್ರಿಯೆ ಕೋರಿದೆ.
ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಸೋಡಿಯಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ಗಳನ್ನು ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಏಪ್ರಿಲ್ 30 ರ ಆದೇಶವನ್ನು ಪ್ರಶ್ನಿಸಿ ಸಿಸೋಡಿಯಾ ಮನವಿ ಸಲ್ಲಿಸಿದ್ದಾರೆ. ನ್ಯಾಯ ಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ನೋಟಿಸ್ ಜಾರಿ ಮಾಡಿದರು.
ತಮ್ಮ ಅರ್ಜಿಗಳ ವಿಚಾರಣೆ ಬಾಕಿ ಇರುವಾಗ ವಾರಕ್ಕೊಮ್ಮೆ ಅನಾರೋಗ್ಯ ಪೀಡಿತ ಪತ್ನಿಯನ್ನು ಭೇಟಿಯಾಗಲು ಅವಕಾಶ ನೀಡುವ ವಿಚಾರಣೆ ನ್ಯಾಯಾಲಯದ ಆದೇಶವನ್ನು ಮುಂದುವರಿಸುವಂತೆ ಸಿಸೋಡಿಯಾ ತಮ್ಮ ಮಧ್ಯಂತರ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೇಳಕೊಂಡಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಮುಂದುವರಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಇಡಿ ಪರ ವಕೀಲರು ಹೇಳಿದರು.
2021-22ರ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ದಾಖಲಿಸಿದ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಗಳನ್ನು ವಿಚಾರಣೆ ನ್ಯಾಯಾಲಯ ವಜಾಗೊಳಿಸಿದೆ. ಮೇ 8 ರಂದು ವಿಚಾರಣೆಗೆ ಹೈಕೋರ್ಟ್ ವಿಷಯವನ್ನು ಪಟ್ಟಿ ಮಾಡಿದೆ.