ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ, ಸಹಾಯಕ ಬಂಧನ
ಮೇ 7- ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮತ್ತುಅವರ ಗೃಹ ಸಹಾಯಕರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಸೋಮವಾರ ರಾತ್ರಿ ವಿಚಾರಣೆ ನಡೆಸಿದ ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಇಬ್ಬರನ್ನುಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಭಾಗವಾಗಿ ಲಾಲ್ ಅವರ ಮನೆ ಕೆಲಸಗಾರ ಜಹಾಂಗೀರ್ ಅವರ ಫ್ಲಾಟ್ ಮೇಲೆ ಸೋಮವಾರ ಇಡಿ ದಾಳಿ ನಡೆಸಿದೆ. 32 ಕೋಟಿ ರೂ.ನಗದು ಸೇರಿದಂತೆ 35.23 ಕೋಟಿ ರೂ. ವಶ ಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಚಿವ ಮತ್ತು ಕಾಂಗ್ರೆಸ್ ನಾಯಕ ಆಲಂ, ತಮ್ಮ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಎಂದಿದ್ದಾರೆ.
ಟ್ರಂಕ್ ಗಳಲ್ಲಿ ಹಣ ಸಾಗಣೆ: ಇಡಿ ಅಧಿಕಾರಿಗಳು ಸೋಮವಾರ ರಾತ್ರಿ ಎಂಟು ನೋಟು ಎಣಿಸುವ ಯಂತ್ರಗಳು ಮತ್ತು ಬ್ಯಾಂಕ್ ಸಿಬ್ಬಂದಿ ನೆರವಿನಿಂದ ಹಣವನ್ನು ಎಣಿಸಬೇಕಾಯಿತು. ಹೆಚ್ಚಿನ ನೋಟುಗಳು 500 ರೂ. ಮುಖಬೆಲೆಯವು. ಹಣವನ್ನು ಸ್ಟೀಲ್ ಟ್ರಂಕ್ ಗಳಲ್ಲಿ ತೆಗೆದುಕೊಂಡು ಸಾಗಿಸಲಾಯಿತು. ಕಟ್ಟಡದ ಸುತ್ತ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು.
ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೀರೇಂದ್ರ ಕೆ. ರಾಮ್‌ಗೆ ಸಂಬಂಧಿಸಿದ ಪ್ರಕರಣ ಇದು.