ಕೇಂದ್ರೀಯ ಏಜೆನ್ಸಿಗಳಿಂದ ಫೋನ್ ಕದ್ದಾಲಿಕೆ: ಡಿಎಂಕೆ
x

ಕೇಂದ್ರೀಯ ಏಜೆನ್ಸಿಗಳಿಂದ ಫೋನ್ ಕದ್ದಾಲಿಕೆ: ಡಿಎಂಕೆ

ರಾಜ್ಯ ಸರ್ಕಾರ ಫೋನ್‌ ಕದ್ದಾಲಿಕೆ ಮಾಡುತ್ತಿದೆ ಎಂದು ಕೆಲದಿನಗಳ ಹಿಂದೆ ಎಐಎಡಿಎಂಕೆ ದೂರು ನೀಡಿತ್ತು.


ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ ಮತ್ತು ಆದಾಯ ತೆರಿಗೆ ಇಲಾಖೆ ಸೇರಿದಂತೆ ಕೇಂದ್ರೀಯ ಸಂಸ್ಥೆಗಳು ಪಕ್ಷದ ಉನ್ನತ ನಾಯಕರು, ಲೋಕಸಭೆ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ಮತ್ತು ಸ್ನೇಹಿತರ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಕೆ ಮಾಡುತ್ತಿವೆ ಎಂದು ಆರೋಪಿಸಿರುವ ಡಿಎಂಕೆ, ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ತಮಿಳುನಾಡು ಪೊಲೀಸ್‌ ಗುಪ್ತಚರ ವಿಭಾಗವು ವಿರೋಧ ಪಕ್ಷದ ನಾಯಕರ ಫೋನ್‌ಗಳನ್ನು ಕದ್ದಾಲಿಕೆ ಮಾಡುತ್ತಿದೆ ಎಂದು ಎಐಎಡಿಎಂ ಕೆ ಕೆಲವು ದಿನಗಳ ಹಿಂದೆ ಚುನಾವಣೆ ಆಯೋಗ(ಇಸಿ)ಕ್ಕೆ ದೂರು ಸಲ್ಲಿಸಿತ್ತು.

ʻದೇಶದ ಸಾರ್ವಭೌಮತ್ವ ಮತ್ತು ಏಕತೆ, ರಾಜ್ಯದ ಭದ್ರತೆ, ವಿದೇಶದೊಂದಿಗಿನ ಸೌಹಾರ್ದ ಸಂಬಂಧಕ್ಕೆ ಧಕ್ಕೆ, ಸಾರ್ವಜನಿಕ ಸುವ್ಯವಸ್ಥೆ ಅಥ ವಾ ಅಪರಾಧಕ್ಕೆ ಪ್ರಚೋದನೆಯನ್ನುತಡೆಗಟ್ಟುವ ಉದ್ದೇಶ ಹೊರತುಪಡಿಸಿ, ಸಂಬಂಧಿತ ಅಧಿಕಾರಿಗಳ ಪೂರ್ವಾನುಮತಿಯಿಲ್ಲದೆ ಫೋನ್ ಸಂಭಾಷಣೆ ಕದ್ದಾಲಿಕೆ ಮಾಡುವಂತಿಲ್ಲ. ಕೇಂದ್ರ ಏಜೆನ್ಸಿಗಳು ಪಕ್ಷದ ಅಭ್ಯರ್ಥಿಗಳು, ಮುಂಚೂಣಿ ನಾಯಕರು, ಅವರ ಸ್ನೇಹಿತರು ಮತ್ತು ನಿಕಟ ಸಂಬಂಧಿಗಳ ದೂರವಾಣಿಗಳನ್ನು ಅಕ್ರಮವಾಗಿ ಕದ್ದಾಲಿಸುತ್ತಿವೆʼ ಎಂದು ಡಿಎಂಕೆ ಸಂಘಟನೆ ಕಾರ್ಯದರ್ಶಿ ಆರ್‌.ಎಸ್. ಭಾರತಿ ದೂರಿನಲ್ಲಿ ತಿಳಿಸಿದ್ದಾರೆ.

ಅಕ್ರಮ ಸಾಫ್ಟ್‌ವೇರ್ ಬಳಕೆ: ಫೋನ್‌ಗಳನ್ನು ಟ್ಯಾಪ್ ಮಾಡಲು ಮತ್ತು ಆಡಳಿತ ಪಕ್ಷ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಕೇಂದ್ರೀಯ ಏಜೆನ್ಸಿಗಳು ʻಅಕ್ರಮ ಸಾಫ್ಟ್‌ವೇರ್ʼ ಬಳಸುತ್ತಿವೆ. ಈ ಏಜೆನ್ಸಿಗಳು ರಾಜಕೀಯ ವಿರೋಧಿಗಳ ವಿರುದ್ಧ ಪೆಗಾಸಸ್‌ನಂತಹ ಸಾಫ್ಟ್‌ವೇರ್ ಅನ್ನು ಬಳಸಿದ್ದವು ಎಂಬುದನ್ನು ಮರೆಯಲು ಸಾಧ್ಯವಿಲ್ಲʼ ಎಂದರು.

ʻಫೋನ್ ಕದ್ದಾಲಿಕೆ ಆರೋಪದ ಬಗ್ಗೆ ತನಿಖೆ ನಡೆಸಬೇಕು. ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳ ಬೇಕುʼ ಎಂದು ಇಸಿಯನ್ನು ಒತ್ತಾಯಿಸಿದರು.

Read More
Next Story