ನ್ಯೂಸ್‌ಕ್ಲಿಕ್‌  ಸಂಪಾದಕನ  ವಿರುದ್ಧ ದೋಷಾರೋಪ
x

ನ್ಯೂಸ್‌ಕ್ಲಿಕ್‌ ಸಂಪಾದಕನ ವಿರುದ್ಧ ದೋಷಾರೋಪ

ದೆಹಲಿ ಗಲಭೆ, ರೈತರ ಪ್ರತಿಭಟನೆ, ಭಯೋತ್ಪಾದಕರಿಗೆ ನೆರವು ನೀಡಿದ ಆರೋಪ


ಹೊಸದಿಲ್ಲಿ: ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು 2020 ರ ದೆಹಲಿ ಗಲಭೆಗಳನ್ನು ಪ್ರಚೋದಿಸಲು, ಕೋವಿಡ್ -19 ಕುರಿತು ತಪ್ಪು ಮಾಹಿತಿ ಅಭಿಯಾನ ನಡೆಸಲು, ರೈತರ ಪ್ರತಿಭಟನೆಯನ್ನು ಪ್ರಚೋದಿಸಲು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ್ದಾರೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಹರ್ದೀಪ್ ಕೌರ್ ಅವರ ಮುಂದೆ ಸಲ್ಲಿಸಿದ ದೋಷಾರೋಪ ಪಟ್ಟಿಯನ್ನು ನ್ಯಾಯಾಧೀಶರು ಮಂಗಳವಾರ ವಿಚಾರಣೆಗೆ ತೆಗೆದುಕೊಂಡರು.

ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಹಲವು ಉದ್ಯೋಗಿಗಳಿಗೆ ಪುರ್ಕಾಯಸ್ಥ ಅವರು ಸಂಬಳ ನೀಡುತ್ತಿದ್ದರು. ಮತ್ತೊಬ್ಬ ಕಾರ್ಯಕರ್ತ ಗೌತಮ್ ನವ್ಲಾಖಾ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಫ್‌ಐಆರ್‌ ನಲ್ಲಿ ಹೇಳಲಾಗಿದೆ. ನ್ಯೂಸ್‌ಕ್ಲಿಕ್ ಮಾನವ ಸಂಪನ್ಮೂಲ (ಎಚ್‌ಆರ್) ಮುಖ್ಯಸ್ಥ ಮತ್ತು ಆರೋಪಿ-ಅನುಮೋದಕ ಅಮಿತ್ ಚಕ್ರವರ್ತಿ ನೀಡಿದ ಹೇಳಿಕೆಯನ್ನು ಚಾರ್ಜ್‌ಶೀಟ್ ಉಲ್ಲೇಖಿಸಿದೆ.ʻತೀಸ್ತಾ ಅವರಿಗೆ ಎಫ್‌ಸಿಆರ್‌ಎ ಸ್ಥಗಿತಗೊಂಡಿದ್ದರಿಂದ, ಪುರಕಾಯಸ್ಥ ಅವರು ಸೆಟಲ್ವಾಡ್‌ ಅವರ ಅನೇಕ ಉದ್ಯೋಗಿಗಳಿಗೆ ವೇತನ ನೀಡುತ್ತಿದ್ದರುʼ ಎಂದು ಹೇಳಿದ್ದಾರೆ.

ಶ್ರೀಲಂಕಾ ಮೂಲದ ಅಮೆರಿಕದ ಪ್ರಜೆ ನೆವಿಲ್ಲೆ ರಾಯ್ ಸಿಂಘಮ್ ಒಡೆತನದ ವಿವಿಧ ಕಂಪನಿಗಳಿಂದ ಪುರ್ಕಾಯಸ್ಥ ಹಣ ಪಡೆಯುತ್ತಿ ದ್ದರು. 2020ರ ದೆಹಲಿ ಗಲಭೆಗೆ ಪ್ರಚೋದನೆ ನೀಡಿದ್ದಕ್ಕೆ ಸಿಂಘಮ್‌ನಿಂದ ಪಡೆದ ಹಣದಲ್ಲಿ ಪುರ್ಕಾಯಸ್ಥ 36 ಲಕ್ಷ ರೂ.ಗಳನ್ನು ಶರ್ಜೀಲ್ ಇಮಾಮ್‌ಗೆ ನೀಡುವಂತೆ ನಿರ್ದೇಶನ ನೀಡಿದ್ದರು. ಸಿಎಎ- ಎನ್‌ಆರ್‌ಸಿ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಪ್ರಚೋದಿಸಲು ಮತ್ತು ಹಿಂಸೆಯನ್ನು ಉತ್ತೇಜಿಸಲು ನಿಧಿಯಿಂದ ಸ್ವಲ್ಪ ಮೊತ್ತವನ್ನು ಎಸ್‌ಎಫ್‌ಐ ಕಾರ್ಯಕರ್ತೆ ಅನುಷಾ ಪೌಲ್ ಮತ್ತು ಪವನ್ ಕುಲಕರ್ಣಿ ಅವರಿಗೆ ನೀಡಲಾಗಿದೆʼ ಎಂದು ಆರೋಪಿಸಿದೆ.

ಕೋವಿಡ್, ರೈತ ಆಂದೋಲನದ ಸಂದರ್ಭದಲ್ಲಿ ಪುರಕಾಯಸ್ಥ ನೆರವು ನೀಡಿದ್ದಾರೆ. ಕಾಶ್ಮೀರದಲ್ಲಿ ಮಗ ಪ್ರತೀಕ್ ಪುರ್ಕಾಯಸ್ಥ ನೇತೃತ್ವ ದಲ್ಲಿ ಕಾಶ್ಮೀರ ಕೋಶವನ್ನು ರಚಿಸಿದರು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ದೇಶವಿರೋಧಿಗಳಿಗೆ ಸಣ್ಣಪ್ರಮಾಣದಲ್ಲಿ ಆರ್ಥಿಕ ನೆರವು ನೀಡಲಾಗಿದೆ ಎಂದು ಎಫ್‌ಐಆರ್‌ ನಲ್ಲಿದೆ.

ನ್ಯಾಯಾಧೀಶರು ವಿಚಾರಣೆಯನ್ನು ಮೇ 31ಕ್ಕೆ ನಿಗದಿಪಡಿಸಿದರು. ಅಮಿತ್ ಚಕ್ರವರ್ತಿ ಪ್ರಕರಣದಲ್ಲಿ ಅನುಮೋದಕರಾಗಿದ್ದಾರೆ. ಕಳೆದ ಅಕ್ಟೋಬರ್ 3 ರಂದು ದೆಹಲಿ ಪೊಲೀಸರ ವಿಶೇಷ ಕೋಶ ಅಮಿತ್ ಚಕ್ರವರ್ತಿ ಮತ್ತು ಪುರ್ಕಾಯಸ್ಥ ಅವರನ್ನು ಬಂಧಿಸಿತ್ತು.

Read More
Next Story