
ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆಗೆ ಶಿಫಾರಸು: ಬಿಜೆಪಿ ಪಿತೂರಿ ಎಂದ ಆಪ್
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ಹಣ ಪಡೆದ ಆರೋಪ ಕುರಿತು ಎನ್‌ಐಎ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಶಿಫಾರಸು ಕೇಜ್ರಿವಾಲ್ ವಿರುದ್ಧ ಬಿಜೆಪಿಯ ʻಮತ್ತೊಂದು ಪಿತೂರಿʼ ಎಂದು ಎಎಪಿ ಆರೋಪಿಸಿದೆ.
ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಬಿಡುಗಡೆಗೆ ನೆರವಾಗುವಂತೆ ಕೇಜ್ರಿವಾಲ್ ನೇತೃತ್ವದ ಎಎಪಿ, ಖಲಿಸ್ತಾನಿ ಗುಂಪುಗಳಿಂದ 16 ದಶಲಕ್ಷ ಡಾಲರ್ ಹಣ ಪಡೆದಿದೆ ಎಂದು ರಾಜ್ಯಪಾಲರಿಗೆ ದೂರು ಬಂದಿದೆ ಎಂದು ಎಲ್‌ಜಿ ಕಾರ್ಯದರ್ಶಿ ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಅಮೃತಸರ ಸೆಂಟ್ರಲ್ ಜೈಲಿನಲ್ಲಿರುವ ಭುಲ್ಲರ್, 1993 ರಲ್ಲಿ ದೆಹಲಿಯಲ್ಲಿ ಬಾಂಬ್ ಸ್ಫೋಟದಲ್ಲಿ ಒಂಬತ್ತು ಜನರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ತೀರ್ಮಾನಿಸಿದ ಟಾಡಾ ನ್ಯಾಯಾಲಯ, ಆಗಸ್ಟ್ 25, 2001 ರಂದು ಮರಣದಂಡನೆ ವಿಧಿಸಿತು. ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ರದ್ದುಗೊಳಿಸಿದ್ದರಿಂದ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಎಲೆಕ್ಟ್ರಾನಿಕ್ ಪುರಾವೆ: ʻದೂರುದಾರರು ನೀಡಿರುವ ಎಲೆಕ್ಟ್ರಾನಿಕ್ ಸಾಕ್ಷ್ಯಗಳಿಗೆ ಫೋರೆನ್ಸಿಕ್ ಪರೀಕ್ಷೆ ಸೇರಿದಂತೆ ತನಿಖೆ ಅಗತ್ಯವಿದೆʼ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಪರಿಗಣಿಸುವ ಒಂದು ದಿನ ಮುಂಚಿತವಾಗಿ ಎಲ್‌ಜಿ ಪತ್ರ ಬರೆದಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಗುರ್‌ಪತ್ವಂತ್ ಸಿಂಗ್ ಪನ್ನುನ್ ಬಿಡುಗಡೆ ಮಾಡಿದ ವಿಡಿಯೋವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಎಪಿ 2014 ಮತ್ತು 2022 ರ ನಡುವೆ ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಡಾಲರ್ ಪಡೆದಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ವಿರುದ್ಧ ವಾಗ್ದಾಳಿ: ಪ್ರತಿಕ್ರಿಯಿಸಿದ ಎಎಪಿ ನಾಯಕ ಮತ್ತು ದೆಹಲಿ ಸಚಿವ ಸೌರಭ್ ಭಾರದ್ವಾಜ್, ʻಬಿಜೆಪಿ ಆಜ್ಞೆ ಮೇರೆಗೆ ಕೇಜ್ರಿವಾಲ್ ವಿರುದ್ಧ ಮತ್ತೊಂದು ಪಿತೂರಿ. ಅವರು ದೆಹಲಿಯಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದ ಕಂಗೆಟ್ಟಿದ್ದಾರೆʼ ಎಂದು ಟೀಕಿಸಿದ್ದಾರೆ.
ಜೂನ್ 2015 ರಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಭುಲ್ಲರ್ ಅವರನ್ನು ತಿಹಾರ್ ಜೈಲಿನಿಂದ ಅಮೃತಸರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.