ಸೈಬರ್ ದಾಳಿ: ಐಯುಎಂಎಲ್ ಕಾರ್ಯಕರ್ತನ ವಿರುದ್ಧ ಪ್ರಕರಣ
ಕಣ್ಣೂರು (ಕೇರಳ), ಏಪ್ರಿಲ್ 17- ಸಿಪಿಐ(ಎಂ) ಹಿರಿಯ ನಾಯಕಿ ಕೆ.ಕೆ. ಶೈಲಜಾ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಆರೋಪದ ಮೇಲೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನ್ಯೂ ಮಾಹಿ ಪೊಲೀಸರು ಐಯುಎಂಎಲ್ ಸ್ಥಳೀಯ ಪದಾಧಿಕಾರಿ ಅಸ್ಲಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಲ್ಲಿ ಐಯುಎಂಎಲ್ ಪ್ರಮುಖ ಸದಸ್ಯ.
ಶೈಲಜಾ ಅವರು ವಡಕರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್‌ನ ಶಫಿ ಪರಂಬಿಲ್ ಮತ್ತು ಬಿಜೆಪಿಯ ಪ್ರಫುಲ್ ಕೃಷ್ಣ ಪ್ರತಿಸ್ಪರ್ಧಿಗಳಾಗಿದ್ದಾರೆ. ʻಆರೋಪಿ ವಿರುದ್ಧ ಐಪಿಸಿಯ ಸೆಕ್ಷನ್ 153 ಮತ್ತು ಕೇರಳ ಪೊಲೀಸ್ ಕಾಯಿದೆಯ 120 (ಒ) ಅಡಿ ಪ್ರಕರಣ ದಾಖಲಿಸಿದ್ದೇವೆ. ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುಡಿಎಫ್ ಅಭ್ಯರ್ಥಿಗೆ ಗೊತ್ತಿದ್ದೇ ಆಕ್ಷೇಪಾರ್ಹ ಪ್ರಚಾರ ನಡೆಸಲಾಗಿದೆ ಎಂದು ಆಡಳಿತಾರೂಢ ಸಿಪಿಐ(ಎಂ) ಆರೋಪಿಸಿದ್ದು, ವಿರೋಧ ಪಕ್ಷದವರು ಆರೋಪವನ್ನು ತಿರಸ್ಕರಿಸಿದ್ದಾರೆ. ಶೈಲಜಾ ಮತ್ತು ಪರಂಬಿಲ್ ಇಬ್ಬರೂ ಹಾಲಿ ಶಾಸಕರು.
ಖಂ ಡನೆ: ಸಿಪಿಐ(ಎಂ) ಪಾಲಿಟ್‌ಬ್ಯುರೊ ಸದಸ್ಯೆ ಬೃಂದಾ ಕಾರಟ್ ಹೇಳಿಕೆಯಲ್ಲಿ ಶೈಲಜಾ ವಿರುದ್ಧ ಬಳಸಿದ ʻನಾಚಿಕೆಗೇಡಿನ ಲೈಂಗಿಕ ಭಾಷೆʼ ಯನ್ನು ಖಂಡಿಸಿದ್ದಾರೆ. ವಡಕರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಷಿಯಲ್ ಮೀಡಿಯಾ ತಂಡವೇ ಇದನ್ನು ಮಾಡಿದೆ ಎಂದು ಆರೋಪಿಸಿದ್ದಾರೆ.
ಆದರೆ, ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಯುಡಿಎಫ್ ಮಹಿಳೆಯರನ್ನು ಅಥವಾ ಎದುರಾಳಿ ಅಭ್ಯರ್ಥಿಗಳನ್ನು ಅವಮಾನಿಸುವುದನ್ನು ಪ್ರೋತ್ಸಾಹಿಸುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ. ʻಶೈಲಜಾ ಅವರ ಬೆಂಬಲಕ್ಕೆ ಯುಡಿಎಫ್‌ನ ಮಹಿಳಾ ಶಾಸಕಿಯರಾದ ಕೆ.ಕೆ. ರೆಮಾ ಮತ್ತು ಉಮಾ ಥಾಮಸ್ ಶೈಲಜಾ ಬಂದಿದ್ದು, ಎಡ ಪಕ್ಷದ ನಾಯಕತ್ವದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲʼ ಎಂದು ದೂರಿದರು.