ಕೋವಿಶೀಲ್ಡ್ ಲಸಿಕೆ ಬಳಿಕ ಮಗಳ ಮರಣ: ಆಸ್ಟ್ರಾಜೆನೆಕಾ ವಿರುದ್ಧ ಮೊಕದ್ದಮೆ
x

ಕೋವಿಶೀಲ್ಡ್ ಲಸಿಕೆ ಬಳಿಕ ಮಗಳ ಮರಣ: ಆಸ್ಟ್ರಾಜೆನೆಕಾ ವಿರುದ್ಧ ಮೊಕದ್ದಮೆ


ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ನಂತರ 2021ರಲ್ಲಿ ಸಾವನ್ನಪ್ಪಿದ ಯುವತಿಯ ಪೋಷಕರು ಆಸ್ಟ್ರಾಜೆನೆಕಾ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

ಯುರೋಪಿನಲ್ಲಿ ವ್ಯಾಕ್ಸ್‌ಜೆವ್ರಿಯಾ ಮತ್ತು ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲ್ಪಡುವ ಕೋವಿಡ್‌ ಲಸಿಕೆ ʻಅತ್ಯಂತ ಅಪರೂಪದ ಪ್ರಕರಣʼಗಳಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕುಸಿತ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಸಂಬಂಧಿತ ಅಡ್ಡ ಪರಿಣಾಮ ಉಂಟುಮಾಡಬಹುದು ಎಂದು ಆಸ್ಟ್ರಾಜೆನೆಕಾ ಇತ್ತೀಚೆಗೆ ನ್ಯಾಯಾಲಯ ದಲ್ಲಿ ಒಪ್ಪಿಕೊಂಡಿದೆ. ಆನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ದಂಪತಿ ಹೇಳಿದರು. ಭಾರತದಲ್ಲಿ ಆಸ್ಟ್ರಾಜೆನೆಕಾ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ ಐಐ) ತಯಾರಿಸಿದೆ.

ತಡವಾಗಿ ಒಪ್ಪಿಕೊಂಡಿದೆ: ಲಸಿಕೆಯನ್ನು ನೀಡಿದ ನಂತರ 2021ರಲ್ಲಿ ನಿಧನರಾದ ಕಾರುಣ್ಯ(20) ಅವರ ತಂದೆ ವೇಣುಗೋಪಾಲನ್ ಗೋವಿಂದನ್ ಅವರು ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ. ಎಕ್ಸ್‌ ನಲ್ಲಿನ ಪೋಸ್ಟ್‌ನಲ್ಲಿ, ʻಕಂಪನಿ ಬಹಳ ತಡವಾಗಿ ಮತ್ತು ಹಲವಾರು ಜೀವಗಳನ್ನು ಕಳೆದು ಕೊಂಡ ನಂತರ ಒಪ್ಪಿಕೊಂಡಿದೆʼ ಎಂದು ಬರೆದಿದ್ದಾರೆ.

ʻ2021 ರ ಮಾರ್ಚ್‌ನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಸಂಭವಿಸಿದ ಸಾವುಗಳಿಂದಾಗಿ 15 ಯುರೋಪಿಯನ್ ದೇಶಗಳು ಈ ಲಸಿಕೆಯನ್ನು ಅಮಾನತುಗೊಳಿಸಿದಾಗ ಅಥವಾ ವಯಸ್ಸಿನ ಮಿತಿ ಹೇರಿದಾಗ, ಒಬ್ಬ ಜವಾಬ್ದಾರಿಯುತ ತಯಾರಕರಾಗಿ ಆಸ್ಟ್ರಾಜೆನೆಕಾ ಮತ್ತು ಅದರ ಭಾರತೀಯ ತಯಾರಕ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್, ಲಸಿಕೆಗಳ ತಯಾರಿಕೆ ಮತ್ತು ಪೂರೈಕೆಯನ್ನು ನಿಲ್ಲಿಸಬೇಕಿತ್ತುʼ ಎಂದು ಬರೆದಿದ್ದಾರೆ.

ಕೇಂದ್ರ ಸರ್ಕಾರ, ನಿಯಂತ್ರಣ ಸಂಸ್ಥೆಗಳ ದೂಷಣೆ: ಲಸಿಕೆ ಎಂದು ಕರೆಸಿಕೊಂಡ ಈ ವಸ್ತುವನ್ನು ತೆಗೆದುಕೊಂಡು ಮೃತಪಟ್ಟ ತಮ್ಮ ಮಗಳು ಹಾಗೂ ಅಸಂಖ್ಯಾತ ಇತರರ ಸಾವಿಗೆ ಸೀರಂ ಇನ್‌ ಸ್ಟಿಟ್ಯೂಟ್‌ ,ಭಾರತ ಸರ್ಕಾರ ಮತ್ತು ದೇಶದ ನಿಯಂತ್ರಣ ಸಂಸ್ಥೆಗಳು ಕಾರಣ ಎಂದು ಗೋವಿಂದನ್ ಅವರು ದೂಷಿಸಿದರು.

ಸರ್ಕಾರ ಸಾಕಷ್ಟು ದತ್ತಾಂಶ ಇಲ್ಲದೆ, ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸರ್ಕಾರದ ಬೊಕ್ಕಸದ ಭಾರಿ ವೆಚ್ಚದಲ್ಲಿ ರಾಷ್ಟ್ರದಾದ್ಯಂತ ಪ್ರಚಾರ ಮಾಡಿದೆ. ಪ್ರತಿಕೂಲ ಪರಿಣಾಮ ಆಗುತ್ತಿದೆ ಎಂಬ ಮಾಹಿತಿ ಹೊರಹೊಮ್ಮಿದಾಗ, ಲಸಿಕೆ ಹಾಕುವಿಕೆಯನ್ನು ನಿಲ್ಲಿಸಲಿಲ್ಲ ಅಥವಾ ಜನರು ಹಾಗೂ ವೈದ್ಯರಲ್ಲಿ ಕನಿಷ್ಠ ತಿಳಿವು ಮೂಡಿಸಲು ಪ್ರಯತ್ನಿಸಲಿಲ್ಲ ಎಂದು ಹೇಳಿದರು.

ಪ್ರಕರಣಗಳ ವಿಚಾರಣೆ ಆಗುತ್ತಿಲ್ಲ: ದುಃಖದಲ್ಲಿರುವ ಪೋಷಕರು ವಿವಿಧ ನ್ಯಾಯಾಲಯಗಳಲ್ಲಿ ಹೋರಾಡುತ್ತಿದ್ದಾರೆ. ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿಲ್ಲ. ದೈಹಿಕ ಸ್ವಾಯತ್ತೆ, ಸಂಪೂರ್ಣ ಬಹಿರಂಗಪಡಿಸುವಿಕೆ ಮತ್ತು ತಿಳಿವಳಿಕೆಯುಳ್ಳ ಒಪ್ಪಿಗೆಯ ಮೂಲಭೂತ ತತ್ವಗಳನ್ನು ನಿರ್ಭೀತಿಯಿಂದ ಉಲ್ಲಂಘಿಸಲಾಗಿದೆ. ಕ್ರಿಮಿನಲ್ ಉದ್ದೇಶ ಅಥವಾ ತಯಾರಕರ ನಿರ್ಲಕ್ಷ್ಯದಿಂದ ಉತ್ಪಾದಕರು, ಸರ್ಕಾರ ಇಲ್ಲವೇ ಸರ್ಕಾರಕ್ಕೆ ಸಲಹೆ ನೀಡುವ ಪರಿಣತ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ನಾವು ಪ್ರಕರಣಗಳನ್ನು ಅಂತ್ಯದವರೆಗೂ ಮುಂದುವರಿಸುತ್ತೇವೆ, ʼಎಂದು ಬರೆದಿದ್ದಾರೆ.

ʻಒಂದುವೇಳೆ ಪರಿಹಾರ ಲಭ್ಯವಾಗದಿದ್ದರೆ, ನ್ಯಾಯ ಮತ್ತು ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ ನಡೆಸುವ ಇಂಥ ದುಷ್ಕೃತ್ಯಗಳು ಮರುಕಳಿಸುವುದನ್ನು ತಡೆಯಲು, ಅಪರಾಧಿಗಳ ವಿರುದ್ಧ ಹೊಸ ಪ್ರಕರಣಗಳನ್ನು ದಾಖಲಿಸುತ್ತೇವೆ. ಸಂತ್ರಸ್ತರ 8 ಕುಟುಂಬಗಳು ಸಂಪರ್ಕದಲ್ಲಿವೆ ಮತ್ತು ತಾವು ಅವರೆಲ್ಲರ ಸಾಮಾನ್ಯ ಭಾವನೆಗಳನ್ನು ಪ್ರತಿಧ್ವನಿಸುತ್ತಿದ್ದೇನೆʼ ಎಂದು ಅವರು ಹೇಳಿದರು.

ಆಸ್ಟ್ರಾಜೆನೆಕಾ ಇಂಗ್ಲೆಂಡಿನಲ್ಲಿ 50 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಲಸಿಕೆಯಿಂದ ಸಾವು ಅಥವಾ ತೀವ್ರ ಅನಾರೋಗ್ಯದ ಮೊಕದ್ದಮೆಯನ್ನು ಎದುರಿಸುತ್ತಿದೆ.

Read More
Next Story