ಮಾಲ್ಡಾದಲ್ಲಿ ‌ಜಾನುವಾರು ಕಳ್ಳಸಾಗಣೆ ತಡೆದಿಲ್ಲವೇಕೆ?: ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ
x

ಮಾಲ್ಡಾದಲ್ಲಿ ‌ಜಾನುವಾರು ಕಳ್ಳಸಾಗಣೆ ತಡೆದಿಲ್ಲವೇಕೆ?: ಪ್ರಧಾನಿಗೆ ಕಾಂಗ್ರೆಸ್ ಪ್ರಶ್ನೆ


ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಚುನಾವಣೆ ಪ್ರಚಾರ ನಡೆಸಬೇಕಿದ್ದು,ಅದಕ್ಕೂ ಮುನ್ನ ಕಾಂಗ್ರೆಸ್‌ ಅವರಿಗೆ ಕೆಲವು ಅಹಿತಕರ ಪ್ರಶ್ನೆಗಳನ್ನು ಕೇಳಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಸರಣಿ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದು, ಈ ಪ್ರದೇಶದಲ್ಲಿ ನಡೆಯುತ್ತಿರುವ ಜಾನುವಾರು ಕಳ್ಳಸಾಗಣೆಯನ್ನು ಪ್ರಸ್ತಾಪಿಸಿದ್ದಾರೆ.

ʻಮಾಲ್ಡಾದಲ್ಲಿ ನದಿ ಕೊರೆತವನ್ನು ತಡೆಯಲು ಪ್ರಧಾನಿ ಏಕೆ ಏನೂ ಮಾಡಿಲ್ಲ? ಮಾಲ್ಡಾ ವಿಮಾನ ನಿಲ್ದಾಣದ ಬಗ್ಗೆಕೈಗೊಂಡ ಕ್ರಮ ಏನು? ಅಕ್ರಮ ದನಗಳ ಸಾಗಣೆ ತಡೆಯಲು ಪ್ರಧಾನಿ ಏನು ಮಾಡಿದ್ದಾರೆ?ʼ ಎಂದು ಪ್ರಶ್ನಿಸಿದ್ದಾರೆ. ಮಾಲ್ಡಾ ಜಿಲ್ಲೆಯ ಸಾವಿರಾರು ಕುಟುಂಬಗಳು ಗಂಗಾ ಮತ್ತು ಫುಲಾಹರ್ ನದಿಗಳಿಂದ ಭೂಮಿ ಕೊಚ್ಚಿಹೋಗುವುದರಿಂದ, ಬಳಲುತ್ತಿದ್ದಾರೆ ಎಂದು ಹೇಳಿದರು.

ಮಣ್ಣಿನ ಸವಕಳಿ: ಬಿಜೆಪಿ ಶಾಸಕರಾದ ಶ್ರೀರೂಪಾ ಮಿತ್ರ ಚೌಧರಿ ಅವರು 2023 ರಲ್ಲಿ ಪ್ರಧಾನಿಗೆ ಪತ್ರ ಬರೆದು, ನದಿ ಕೊರೆತದಿಂದ ಪರಿಶಿಷ್ಟ ಜಾತಿ ಅಥವಾ ಇತರ ಹಿಂದುಳಿದ ವರ್ಗಗಳ ಜನ ತೊಂದರೆಗೀಡಾಗಿದ್ದಾರೆ ಎಂದು ಹೇಳಿದ್ದನ್ನು ಉಲ್ಲೇಖಿಸಿದ್ದಾರೆ.

ʻಮಾಲ್ಡಾ ಜಿಲ್ಲೆಯ ಬಹುಪಾಲು ಕೇಂದ್ರ ಸರ್ಕಾರ ನಿರ್ವಹಿಸುವ ಫರಕ್ಕಾ ಬ್ಯಾರೇಜ್ ಪ್ರದೇಶದಲ್ಲಿದೆ. ಅಧಿಕಾರಕ್ಕೆ ಬಂದು ಹತ್ತು ವರ್ಷ ಕಳೆದಿದ್ದು,ನಮಾಮಿ ಗಂಗೆ ಯೋಜನೆಗೆ ಉದಾರವಾಗಿ ಕಾಗದದ ಮೇಲೆ ಅನುದಾನ ಹಂಚಿಕೆ ಮಾಡಿದರೂ, ನದಿ ಸವೆತದಿಂದ ಮಾಲ್ಡಾದ ಕುಟುಂಬಗಳನ್ನು ರಕ್ಷಿಸಲು ಮೋದಿ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲವೇಕೆ?ʼ ಎಂದು ಪ್ರಶ್ನಿಸಿದರು.

ಮಾಲ್ಡಾ ವಿಮಾನ ನಿಲ್ದಾಣ: ʻಮಾಲ್ಡಾಕ್ಕೆ ವಿಮಾನ ನಿಲ್ದಾಣ ಸೇವೆ ಒದಗಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಸರ್ಕಾರ 10 ವರ್ಷದಿಂದ ವಿಮಾನ ನಿಲ್ದಾಣವನ್ನು ನಿರ್ಲಕ್ಷಿಸಿದೆ. 2014ರಲ್ಲಿ ಮೋದಿ ಪ್ರಧಾನಿಯಾಗುವ ಮುನ್ನವೇ ಪಶ್ಚಿಮ ಬಂಗಾಳ ಸರಕಾರ ರನ್‌ವೇ ನಿರ್ಮಿಸಿತ್ತು. ವಿಮಾನ ನಿಲ್ದಾಣದಿಂದ ಸ್ಥಳೀಯ ವ್ಯಾಪಾರ ವೃದ್ಧಿಯಾಗುತ್ತಿತ್ತು, ಮಾಲ್ಡಾದ ಮಾವಿನ ಹಣ್ಣಿಗೆ ಇನ್ನಷ್ಟು ಉತ್ತೇಜನ ಸಿಗು ತ್ತಿತ್ತು. ಆದರೆ, ಈಗ ಬೆಳಗಿನ ವಾಕಿಂಗ್ ಮಾಡುವವರು ರನ್ ವೇ ಬಳಸುತ್ತಿದ್ದಾರೆʼ ಎಂದು ಹೇಳಿದರು.

ಜಾನುವಾರು ಕಳ್ಳಸಾಗಣೆ: ʻಬಾಂಗ್ಲಾದೇಶಕ್ಕೆ ಅಕ್ರಮವಾಗಿ ಜಾನುವಾರು ಸಾಗಣೆ ತಡೆಯಲು ಪ್ರಧಾನಿ ಏನು ಮಾಡಿದ್ದಾರೆ? ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಿಂದ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ದನಗಳ ಕಳ್ಳಸಾಗಣೆ ವಾಸ್ತವ ಸಂಗತಿ. ರಾಷ್ಟ್ರ ಮಟ್ಟದಲ್ಲಿ ಬಿಎಸ್‌ಎಫ್ ಮತ್ತು ಕಸ್ಟಮ್ಸ್ ಇಲಾಖೆಗಳು ಕಳ್ಳಸಾಗಣೆಗೆ ಜವಾಬ್ದಾರವಾಗಿವೆ. ಅಧಿಕ ಜಾನುವಾರುಗಳು ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳಿಂದ ಬರುತ್ತಿವೆʼ ಎಂದು ಹೇಳಿದ್ದಾರೆ.

Read More
Next Story