ಜನರ ಆಸ್ತಿ ಮರುಹಂಚಿಕೆಗೆ ಕಾಂಗ್ರೆಸ್ ಯೋಜನೆ: ಪ್ರಧಾನಿ ಮೋದಿ
x

ಜನರ ಆಸ್ತಿ ಮರುಹಂಚಿಕೆಗೆ ಕಾಂಗ್ರೆಸ್ ಯೋಜನೆ: ಪ್ರಧಾನಿ ಮೋದಿ

ರಾಜಸ್ಥಾನದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ಅಲಿಘಡದಲ್ಲಿ ಪುನರುಚ್ಚಾರ


ರಾಜಸ್ಥಾನದಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ಮರುಹಂಚಿಕೆ ಮಾಡಲು ಯೋಜಿಸುತ್ತಿದೆ ಎಂದು ಸೋಮವಾರ ಆರೋಪಿಸಿದರು.

ಉತ್ತರ ಪ್ರದೇಶದ ಅಲಿಗಢದ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಜನರ ಆಸ್ತಿಗಳ ಬಗ್ಗೆ ಸಮೀಕ್ಷೆ ನಡೆಸಿ ʻಕಿತ್ತುಕೊಳ್ಳಲುʼ ಯೋಜಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ನೀಡಲಿದೆ ಎಂದು ಭಾನುವಾರ ರಾಜಸ್ಥಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಹೇಳಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮೊದಲ ಹಕ್ಕು ಇದೆ ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಮೋದಿಯವರ ಟೀಕೆಗಳು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅವರನ್ನು ಖಂಡಿಸಿದೆ ಮತ್ತು ಪ್ರಧಾನಿ ʻದ್ವೇಷ ಭಾಷಣʼ ಆರಂಭಿಸಿದ್ದಾರೆ ಎಂದು ಆರೋಪಿಸಿದೆ.

ಟೀಕೆಗಳಿಂದ ವಿಚಲಿತರಾಗದ ಪ್ರಧಾನಿ: ಟೀಕೆಗಳಿಗೆ ಹಿಂಜರಿಯದ ಮೋದಿ, ಸೋಮವಾರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ವಿರುದ್ಧ ವಾಗ್ದಾಳಿ ನಡೆಸಿದರು. ಮುಸ್ಲಿಂ ಸಮುದಾಯಕ್ಕೆ ಕೆಲವು ಸಾಂತ್ವನದ ಮಾತುಗಳನ್ನು ಆಡಿದರು.

ʻಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿ ಮೇಲೆ ಕಣ್ಣಿಟ್ಟಿವೆ. ತಮ್ಮ ಸರ್ಕಾರ ರಚನೆಯಾದರೆ ನಿಮ್ಮ ಬಳಿ ಏನಿದೆ ಎಂಬುದನ್ನು ಕಂಡುಕೊಳ್ಳುತ್ತೇವೆ ಎಂದು ಕಾಂಗ್ರೆಸ್‌ನ 'ಯುವರಾಜ' ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಎಲ್ಲಾ ಆಸ್ತಿಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡು ಹಂಚಲಾಗುವುದುʼ ಎಂದು ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ʻಇದನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣದ ರೂಪದಲ್ಲಿ ಧರಿಸುವುದು ಮಾತ್ರವಲ್ಲದೆ, ಅದು 'ಸ್ತ್ರೀಧನ'ವಾಗಿದ್ದು, ಕಾನೂನಿನಿಂದ ರಕ್ಷಿಸಲ್ಪಟ್ಟಿದೆ. ಅವರು ತಾಯಿ ಮತ್ತು ಸಹೋದರಿಯರ ಆಸ್ತಿ ಮತ್ತು ಮಂಗಳಸೂತ್ರವನ್ನು ಕಸಿದುಕೊಳ್ಳಲು ಕಾನೂನು ತಿದ್ದುಪಡಿ ಮಾಡಲು ಬಯಸುತ್ತಾರೆ, ʼ ಎಂದು ಹೇಳಿದರು.

ʻಗ್ರಾಮ ಮತ್ತು ನಗರದಲ್ಲಿರುವ ಪಿತ್ರಾರ್ಜಿತ ಮನೆಯನ್ನು ಕಿತ್ತುಕೊಳ್ಳಲಾಗುವುದು ಮತ್ತು ಇಲ್ಲದವರಿಗೆ ನೀಡಲಾಗುವುದು. ಇದು ಕಮ್ಯುನಿಸ್ಟ್ ಮತ್ತು ಮಾವೋವಾದಿ ಚಿಂತನೆ. ಇದನ್ನು ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟ ಜಾರಿಗೆ ತರಲು ಬಯಸುತ್ತಿವೆ. ಕಾಂಗ್ರೆಸ್ ನಿಮ್ಮ ಸಂಪತ್ತಿನ ಮೇಲೆ ಕೈ ಇಡಲು ಬಯಸುತ್ತದೆ. ನಿಮ್ಮ ಆಸ್ತಿ ಸುರಕ್ಷಿತವಾಗಿರುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತದೆ,ʼ ಎಂದು ಪ್ರಧಾನಿ ಹೇಳಿದರು.

ರಾಹುಲ್, ಅಖಿಲೇಶ್ ಟೀಕೆ: ಅಲಿಘಡದ ಜನರು ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ ಮತ್ತು ಇಬ್ಬರು ರಾಜಕುಮಾರರ ನಡೆಸುತ್ತಿದ್ದ ಆಮಿಷಗಳಿಗೆ ಬೀಗ ಹಾಕಿದ್ದಾರೆ ಎಂದು ರಾಹುಲ್ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಉಲ್ಲೇಖಿಸಿ ಹೇಳಿದರು.

ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸಲು ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮುಸ್ಲಿಮರ ತಲುಪುವ ಪ್ರಯತ್ನ: ತ್ರಿವಳಿ ತಲಾಖ್ ಕಾನೂನು ಜಾರಿಯು ಮುಸ್ಲಿಂ ಮಹಿಳೆಯರ ವಿಮೋಚನೆಗೆ ಸಹಾಯ ಮಾಡಿದೆ ಎಂದು ಮೋದಿ ಹೇಳಿದರು. ʻಕಾಂಗ್ರೆಸ್ ಮತ್ತು ಎಸ್ಪಿ ತುಷ್ಟೀಕರಣ ರಾಜಕೀಯ ಮಾಡುತ್ತಿವೆ. ಮುಸ್ಲಿಮರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗೆ ಏನನ್ನೂ ಮಾಡಿಲ್ಲʼ ಎಂದರು.

ʻಹಿಂದೆ ಕಡಿಮೆ ಹಜ್ ಕೋಟಾದಿಂದ ಸಾಕಷ್ಟುಸಮಸ್ಯೆ ಇದ್ದಿತ್ತು ಮತ್ತು ಲಂಚ ಮನೆ ಮಾಡಿತ್ತು. ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಹಜ್‌ಗೆ ಹೋಗಲು ಅವಕಾಶ ಸಿಗುತ್ತಿತ್ತು. ಮೆಹ್ರಮ್ ಇಲ್ಲದೆ ಮಹಿಳೆಯರು ಹಜ್‌ಗೆ ಹೋಗಲು ತಮ್ಮ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಹಜ್‌ಗೆ ಹೋಗುವ ಸಾವಿರಾರು ಸಹೋದರಿಯರು ನನ್ನನ್ನು ಆಶೀರ್ವದಿಸುತ್ತಿದ್ದಾರೆ,ʼ ಎಂದು ಅವರು ಹೇಳಿದರು.

Read More
Next Story