ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್‌ ಅಧ್ಯಕ್ಷ
x

ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್‌ ಅಧ್ಯಕ್ಷ

'ನ್ಯಾಯಪತ್ರ'ವನ್ನು ವಿವರಿಸಲು ಸಮಯ ನೀಡಲು ಕೋರಿಕೆ


ಏಪ್ರಿಲ್‌ 25- ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪಕ್ಷದ 'ನ್ಯಾಯ ಪತ್ರ'ವನ್ನು ವೈಯಕ್ತಿಕವಾಗಿ ವಿವರಿಸಲು ಸಮಯ ಕೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇಲ್ಲದ ವಿಷಯಗಳ ಬಗ್ಗೆ ನಿಮ್ಮ ಸಲಹೆಗಾರರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ತಮ್ಮ ಎರಡು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

ʻಕಾಂಗ್ರೆಸ್‌ನ ನ್ಯಾಯಪತ್ರವು ಯುವಜನರು, ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಎಲ್ಲ ಜಾತಿ ಮತ್ತು ಸಮುದಾಯಗಳ ಅಂಚಿನಲ್ಲಿ ರುವ ಜನರಿಗೆ ನ್ಯಾಯ ಒದಗಿಸುವ ಗುರಿ ಹೊಂದಿದೆ. ಆಯ್ದ ಕೆಲವು ಪದಗಳನ್ನು ಬಳಸಿಕೊಂಡು ಕೋಮುವಾದದ ಒಡಕು ಮೂಡಿಸುವುದು ನಿಮಗೆ ಅಭ್ಯಾಸವಾಗಿ ಹೋಗಿದೆ. ಈ ರೀತಿ ಮಾತನಾಡುವ ಮೂಲಕ ಕುರ್ಚಿಯ ಘನತೆಯನ್ನು ಕುಗ್ಗಿಸುತ್ತಿದ್ದೀರಿ’ ಎಂದು ಬರೆದಿದ್ದಾರೆ.

ʻಪ್ರಣಾಳಿಕೆಯಲ್ಲಿ ಇಲ್ಲದ ವಿಷಯಗಳನ್ನು ನಿಮ್ಮ ಸಲಹೆಗಾರರು ತಪ್ಪು ಮಾಹಿತಿ ನೀಡುತ್ತಿದ್ದಾರೆ. 'ನ್ಯಾಯಪತ್ರ'ವನ್ನು ವಿವರಿಸಲು ವೈಯಕ್ತಿಕವಾಗಿ ಭೇಟಿಯಾಗಲು ಇಷ್ಟಪಡುತ್ತೇನೆ. ಆನಂತರ, ನೀವು ಯಾವುದೇ ಸುಳ್ಳು ಹೇಳಿಕೆಗಳನ್ನು ನೀಡುವುದಿಲ್ಲʼ ಎಂದು ಹೇಳಿದ್ದಾರೆ.

ಪ್ರಧಾನಿ ಭಾಷೆಯಿಂದ ಆಶ್ಚರ್ಯವಿಲ್ಲ: ʻಪ್ರಧಾನಿ ತಮ್ಮ ಇತ್ತೀಚಿನ ಭಾಷಣಗಳಲ್ಲಿ ಬಳಸಿದ ಭಾಷೆಯಿಂದ ನನಗೆ ಆಘಾತವಾಗಲೀ ಅಥವಾ ಆಶ್ಚರ್ಯವಾಗಲೀ ಆಗಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನವನ್ನು ನೋಡಿದ ನಂತರ, ನೀವು ಮತ್ತು ನಿಮ್ಮ ಪಕ್ಷದ ಇತರ ನಾಯಕರು ಈ ರೀತಿ ಮಾತನಾಡಲು ಪ್ರಾರಂಭಿಸುತ್ತೀರಿ ಎಂದು ನಿರೀಕ್ಷಿಸಲಾಗಿತ್ತು. ಕಾಂಗ್ರೆಸ್ ವಂಚಿತ ಬಡವರು ಮತ್ತು ಅವರ ಹಕ್ಕುಗಳ ಬಗ್ಗೆ ಮಾತನಾಡುತ್ತಿದೆ. ನಿಮಗೆ ಮತ್ತು ನಿಮ್ಮ ಸರ್ಕಾರಕ್ಕೆ ಬಡವರು ಮತ್ತು ಶೋಷಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎನ್ನುವುದು ನಮಗೆ ತಿಳಿದಿದೆʼ ಎಂದು ಹೇಳಿದರು.

ಸರ್ಕಾರ ಕಾರ್ಪೊರೇಟ್‌ಗಳ ಪರ: ʻನಿಮ್ಮ ಸೂಟ್ ಬೂಟ್ ಕಿ ಸರ್ಕಾರ್ ಕಾರ್ಪೊರೇಟ್‌ಗಳಿಗೆ ಕೆಲಸ ಮಾಡುತ್ತದೆ. ವೇತನ ಪಡೆಯುವವರು ಹೆಚ್ಚು ತೆರಿಗೆ ಪಾವತಿಸುತ್ತಾರೆ. ಬಡವರು ಆಹಾರ ಮತ್ತು ಉಪ್ಪಿನ ಮೇಲೆ ಜಿಎಸ್‌ಟಿ ಪಾವತಿಸುತ್ತಾರೆ. ಕಾರ್ಪೊರೇಟ್‌ಗಳು ಜಿಎಸ್‌ಟಿ ಮರುಪಾವತಿಯನ್ನು ವಾಪಸು ಪಡೆಯುತ್ತಾರೆ. ಶ್ರೀಮಂತರು ಮತ್ತು ಬಡವರ ನಡುವಿನ ಅಸಮಾನತೆ ಬಗ್ಗೆ ಹೇಳಿದರೆ, ಉದ್ದೇಶಪೂರ್ವಕವಾಗಿ ಹಿಂದೂ ಮತ್ತು ಮುಸ್ಲಿಮರೊಂದಿಗೆ ಸಮೀಕರಿಸುತ್ತೀರಿʼ ಎಂದು ಕಿಡಿ ಕಾರಿದ್ದಾರೆ.

ʻನಮ್ಮ ಪ್ರಣಾಳಿಕೆಯು ಭಾರತದ ಜನರ ಪರ, ಅವರು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ ಅಥವಾ ಬೌದ್ಧ ಯಾರೇ ಆಗಿರಲಿ, ಅವರ ಪರವಾಗಿದೆ. ನಿಮ್ಮ ಸ್ವಾತಂತ್ರ್ಯಪೂರ್ವ ಮಿತ್ರರಾದ ಮುಸ್ಲಿಂ ಲೀಗ್ ಮತ್ತು ಬ್ರಿಟಿಷರನ್ನು ನೀವು ಇನ್ನೂ ಮರೆತಿಲ್ಲ ಎಂದು ಭಾವಿಸುತ್ತೇನೆʼ ಎಂದು ಹೇಳಿದ್ದಾರೆ.

Read More
Next Story