ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿ.ಎಂ ಸಿದ್ದರಾಮಯ್ಯ !
x
ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿ.ಎಂ ಸಿದ್ದರಾಮಯ್ಯ !

ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಸೋಮವಾರ(ಮಾ.18) ಶಿವಮೊಗ್ಗಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ.


ಲೋಕಸಭೆ ಚುನಾವಣಾ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದ್ದು, ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

“ಬರದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಕೆಲಸದ ದಿನಗಳನ್ನು 100 ರಿಂದ 150ಕ್ಕೆ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ನಲ್ಲಿ 5,300 ಕೋಟಿ ರೂಪಾಯಿ ಅನುದಾನ ಘೋಷಿಸಿ ವರ್ಷಗಳೇ ಕಳೆದರೂ, ಇಲ್ಲಿಯ ವರೆಗೆ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಕೇಂದ್ರದ ಅನುಮತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರವು ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಸಂಕಷ್ಟಸೂತ್ರ ರಚನೆಗೆ ಮಧ್ಯಸ್ಥಿಕೆ ವಹಿಸದೆ ನಾಡಿನ ರೈತರನ್ನು ಕೈಬಿಟ್ಟಿದೆ. ರಾಜ್ಯದ ರೈತರಿಗೆ ಮಾತ್ರ ಯಾಕೆ ಈ ಸಾಲು ಸಾಲು ಅನ್ಯಾಯಗಳು?” ಎಂದಿದ್ದಾರೆ.

“ರೈತ ಚಳವಳಿಗಳ ತವರುನೆಲ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ. ಬಿ.ಎಸ್ ಯಡಿಯೂರಪ್ಪ ಅವರು ಹಿಂದೊಮ್ಮೆ ರೈತರ ಸಾಲ ಮನ್ನಾದ ಭರವಸೆ ನೀಡಿ ನಂತರ ಮುಖ್ಯಮಂತ್ರಿಯಾದ ಮೇಲೆ ನಮ್ಮ ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದು ಹೇಳಿದ್ದರು. ಹಾವೇರಿಯಲ್ಲಿ ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿ ಅಮಾಯಕ ರೈತರನ್ನು ಬಲಿ ಪಡೆದಿದ್ದರು. ಇಂದು ಅದೇ ಯಡಿಯೂರಪ್ಪನವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮ ಆತ್ಮಸಾಕ್ಷಿ ಒಪ್ಪುವುದೇ?” ಎಂದು ಪ್ರಶ್ನೆ ಮಾಡಿದ್ದಾರೆ.

“ರಾಜ್ಯದಲ್ಲಿ ಬರ ಘೋಷಣೆ ಮಾಡಿ 6 ತಿಂಗಳಾಗಿದೆ. 18,177 ಕೋಟಿ ರೂಪಾಯಿ ಪರಿಹಾರದ ಹಣ ಬಿಡುಗಡೆಗೆ ಒತ್ತಾಯಿಸಿ ಹಲವು ಬಾರಿ ಪತ್ರ ಬರೆದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೆ, ಇಲ್ಲಿಯವರೆಗೆ ನಯಾಪೈಸೆ ಪರಿಹಾರದ ಹಣ ಬಿಡುಗಡೆ ಆಗಿಲ್ಲ. ರಾಜ್ಯದ ರೈತರ ಮೇಲೆ ಯಾಕಿಷ್ಟು ದ್ವೇಷ?” ಎಂದು ಹೇಳಿದ್ದಾರೆ.

Read More
Next Story