ಕೇಜ್ರಿವಾಲ್ ಅಬಕಾರಿ ಹಗರಣದ ಕಿಂಗ್‌ಪಿನ್: ಇಡಿ
x

ಕೇಜ್ರಿವಾಲ್ ಅಬಕಾರಿ ಹಗರಣದ 'ಕಿಂಗ್‌ಪಿನ್': ಇಡಿ

ಸುಪ್ರೀಂ ಕೋರ್ಟಿಗೆ 734 ಪುಟಗಳ ಪ್ರಮಾಣಪತ್ರ ಸಲ್ಲಿಕೆ


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದ ʻಕಿಂಗ್‌ಪಿನ್ ಮತ್ತು ಪ್ರಮುಖ ಸಂಚುಕೋರʼ. ಅಪರಾಧಿ ಯನ್ನು ಬಂಧಿಸುವುದರಿಂದ, ʻಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಪರಿಕಲ್ಪನೆʼಯ ಉಲ್ಲಂಘನೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಇಡಿ ತಿಳಿಸಿದೆ.

ಕೇಜ್ರಿವಾಲ್ ಅವರು ತಮ್ಮಸಚಿವರು ಮತ್ತು ಎಎಪಿ ನಾಯಕರೊಂದಿಗೆ ಶಾಮೀಲಾಗಿದ್ದಾರೆ. ಮದ್ಯದ ಉದ್ಯಮಿಗಳಿಂದ ʻಕಿಕ್‌ಬ್ಯಾಕ್‌ʼ ಕೇಳು ವಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ 734 ಪುಟಗಳ ಪ್ರಮಾಣಪತ್ರದಲ್ಲಿ ತಿಳಿಸಿದೆ.

'ಪಿತೂರಿಯಲ್ಲಿ ಭಾಗಿ': ಪಿಎಂಎಲ್‌ಎ 2002ರಲ್ಲಿ ಮುಖ್ಯಮಂತ್ರಿ ಅಥವಾ ಸಾಮಾನ್ಯ ನಾಗರಿಕರನ್ನು ಬಂಧಿಸಲು ವಿಭಿನ್ನ ನಿಬಂಧನೆ ಗಳಿಲ್ಲ ಮತ್ತು ಅರ್ಜಿದಾರರು ತಮ್ಮ ಹುದ್ದೆಯನ್ನು ಒತ್ತಿಹೇಳುವ ಮೂಲಕ ತಮಗೆ ವಿಶೇಷ ವರ್ಗವನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇಡಿ ಹೇಳಿದೆ.

ತಮ್ಮ ಬಂಧನ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲಭೂತ ಸಂರಚನೆಗಳು ಮತ್ತು ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂಬ ಕೇಜ್ರಿವಾಲ್ ಅವರ ವಾದಕ್ಕೆ ಪ್ರತಿಕ್ರಿಯಿಸಿರುವ ತನಿಖಾ ಸಂಸ್ಥೆ, ʻಒಬ್ಬ ವ್ಯಕ್ತಿ ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ, ಅಪರಾಧಿಯನ್ನು ಬಂಧಿಸುವುದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಪರಿಕಲ್ಪನೆಯ ಉಲ್ಲಂಘನೆ ಆಗುವುದಿಲ್ಲ.ಈ ವಾದವನ್ನು ಒಪ್ಪಿಕೊಂಡರೆ, ಅಪರಾಧಿ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಬಂಧನದಿಂದ ವಿನಾಯಿತಿ ನೀಡಬೇಕಾಗುಗುತ್ತದೆʼ ಎಂದು ಹೇಳಿದೆ.

ಬಂಧನದ ಸಮರ್ಥನೆ: ʻಬಂಧನದ ವಿಷಯದಲ್ಲಿ ರಾಜಕಾರಣಿಯನ್ನು ಸಾಮಾನ್ಯ ಕ್ರಿಮಿನಲ್‌ಗಿಂತ ಭಿನ್ನವಾಗಿ ನಡೆಸಿಕೊಳ್ಳುವುದು ಸಂವಿಧಾನದ 14 ನೇ ವಿಧಿ ಪ್ರತಿಪಾದಿಸಿದ ಸಮಾನತೆಯ ತತ್ವವನ್ನು ಉಲ್ಲಂಘಿಸುತ್ತದೆ. ಸೆಕ್ಷನ್ 19 ರ ಅಡಿಯಲ್ಲಿ ಅಗತ್ಯವಾದ ಸಾಕ್ಷ್ಯಗಳಿರುವುದರಿಂದ, ಅವರನ್ನು ಬಂಧಿಸಲಾಗಿದೆ. ಇದು ಪಿಎಂಎಲ್‌ಎ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಆಗಲಿದೆʼ ಎಂದು ಹೇಳಿದೆ.

ʻಕೇಜ್ರಿವಾಲ್ ಅವರನ್ನು ಯಾವುದೇ ದುರುದ್ದೇಶ ಅಥವಾ ಬಾಹ್ಯ ಕಾರಣಗಳಿಗಾಗಿ ಬಂಧಿಸಿಲ್ಲ. ಬಂಧನವು ದುರುದ್ದೇಶಪೂರಿತ ಎಂಬುದು ಸರಿಯಲ್ಲ. ಅರ್ಜಿದಾರರ ವಾದ ಆಧಾರರಹಿತ ಮತ್ತು ಅಸಮರ್ಪಕʼ ಎಂದು ಇಡಿ ಹೇಳಿದೆ.

Read More
Next Story