ಸಂದೇಶಖಾಲಿ ಪ್ರಕರಣ- ಸಿಬಿಐ ತನಿಖೆ ತೃಪ್ತಿಕರ: ಕಲ್ಕತ್ತಾ ಹೈಕೋರ್ಟ್
ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಮತ್ತು ಭೂಕಬಳಿಕೆ ಆರೋಪ ಕುರಿತ ಸಿಬಿಐ ತನಿಖೆಯನ್ನು ಗುರುವಾರ ಪರಿಶೀಲಿಸಿದ ಕಲ್ಕತ್ತಾ ಹೈಕೋರ್ಟ್, ತನಿಖೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಮತ್ತು ನ್ಯಾ.ಹಿರಣ್ಮಯ್ ಭಟ್ಟಾಚಾರ್ಯ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಸೇರಿಸಲು ಅವಕಾಶ ಕೊಟ್ಟರು. ಸಿಬಿಐಗೆ ನಿರ್ದೇಶನ: ನ್ಯಾಯಾಲಯ ಏಪ್ರಿಲ್ 10 ರಂದು ಕೇಂದ್ರೀಯ ತನಿಖಾ ದಳ(ಸಿಬಿಐ) ಆರೋಪ ಕುರಿತು ತನಿಖೆ ನಡೆಸಿ, ಗುರುವಾರ ಪ್ರಗತಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ತನಿಖೆ ಮೇಲೆ ನಿಗಾ ಇಡುವುದಾಗಿಯೂ ಹೇಳಿತ್ತು.
ಭೂಮಿ ಹಾಗೂ ಕಂದಾಯ ದಾಖಲೆಗಳನ್ನು ಪರಿಶೀಲಿಸಿ, ಕೃಷಿ ಭೂಮಿಯನ್ನು ಮೀನುಗಾರಿಕೆಗೆ ಅಕ್ರಮವಾಗಿ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವು ಸಿಬಿಐಗೆ ಹೇಳಿದೆ. ಸುಮಾರು 900 ಭೂ ಕಬಳಿಕೆ ಆರೋಪಗಳಿವೆ ಎಂದ ಕೋರ್ಟ್, ಸಿಬಿಐಗೆ ಸಂಪೂರ್ಣ ಸಹಕಾರ ನೀಡುವಂತೆ ಪಶ್ಚಿಮ ಬಂಗಾಳದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸಿಬಿಐ ಕೋರಿದ ದಾಖಲೆಗಳನ್ನು ಒಂದು ವಾರದೊಳಗೆ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ಭಯದ ವಾತಾವರಣ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕೆಲವರು ಭಯದಿಂದ ಸತ್ಯ ಹೇಳಲು ಹಿಂಜರಿಯುತ್ತಿದ್ದಾರೆ ಎಂದು ಅರ್ಜಿದಾರ-ವಕೀಲ ಪ್ರಿಯಾಂಕಾ ತಿಬ್ರೆವಾಲ್ ವಾದಿಸಿದರು. ದೂರುದಾರರು ರಕ್ಷಣೆ ಕೋರಿದಲ್ಲಿ ಒದಗಿಸಬೇಕು ಮತ್ತು ವಿಶ್ವಾಸ ಮೂಡಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಬಿಐಗೆ ನ್ಯಾಯಾಲಯ ಸೂಚಿಸಿದೆ.
ಸಂದೇಶಖಾಲಿಯ ಕೆಲವು ಸ್ಥಳಗಳಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ ಬಗ್ಗೆ ಅನುಸರಣೆ ಕೊರತೆ ಬಗ್ಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿದೆ. ಸಮಸ್ಯೆ ಪರಿಹರಿಸದಿದ್ದರೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ. ಜೂನ್ 13ರಂದು ವಿಚಾರಣೆಯನ್ನು ಮುಂದೂಡಿದ್ದು, ಪ್ರಗತಿ ವರದಿಯನ್ನು ಸಲ್ಲಿಸಬೇಕೆಂದು ಸಿಬಿಐಗೆ ಸೂಚಿಸಿದೆ.