ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ನಿಧನ
x

ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ನಿಧನ


ಬಿಜೆಪಿ ಹಿರಿಯ ನಾಯಕ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ(72) ಅವರು ಸೋಮವಾರ ರಾತ್ರಿ ನವದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರು 2005 ರಿಂದ 2013 ಮತ್ತು 2017 ರಿಂದ 2020 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ರಾತ್ರಿ 9.45 ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪಕ್ಷದ ಮೂಲಗಳ ಪ್ರಕಾರ, ಮಂಗಳವಾರ ಪಾಟ್ನಾದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ʻಆರು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಸಾಧ್ಯವಾಗುವುದಿಲ್ಲ.ಪ್ರಧಾನಿ ಅವರಿಗೆ ಎಲ್ಲವನ್ನೂ ಹೇಳಿದ್ದೇನೆ. ದೇಶ, ಬಿಹಾರ ಮತ್ತು ಪಕ್ಷಕ್ಕೆ ಕೃತಜ್ಞರಾಗಿರುತ್ತೇನೆ,ʼ ಎಂದು ಅವರು ಎಕ್ಸ್‌ನಲ್ಲಿ ಏಪ್ರಿಲ್ 3 ರಂದು ಬರೆದಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವು ಹಿರಿಯ ನಾಯಕರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ʻಅವರ ಸೌಮ್ಯ ಸ್ವಭಾವ, ಆಡಳಿತದಲ್ಲಿ ದಕ್ಷತೆ ಮತ್ತು ಸಾರ್ವಜನಿಕ ಜೀವನ ದಲ್ಲಿ ಸಮಗ್ರತೆಯು ಅವರ ವ್ಯಕ್ತಿತ್ವ ಮತ್ತು ಕೆಲಸದಲ್ಲಿ ಪ್ರತಿಫಲಿಸುತ್ತದೆ. ಬಿಹಾರದ ಉಪಮುಖ್ಯಮಂತ್ರಿಯಾಗಿ, ಸಂಸದರಾಗಿ ಸುಶೀಲ್ ಕುಮಾರ್ ಮೋದಿ ಅವರು ಉನ್ನತ ಆದರ್ಶಗಳನ್ನು ಎತ್ತಿ ಹಿಡಿದಿದ್ದಾರೆ,ʼ ಎಂದು ರಾಷ್ಟ್ರಪತಿ ಹೇಳಿದ್ದಾರೆ.

ʻಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ರಾಜ್ಯಸಭೆ ಮಾಜಿ ಸದಸ್ಯ ಸುಶೀಲ್ ಕುಮಾರ್ ಮೋದಿಯವರ ನಿಧನದಿಂದ ಬಿಜೆಪಿ ತೀವ್ರ ದುಃಖಿತವಾಗಿದೆ. ಇದು ಬಿಹಾರ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟʼ ಎಂದು ಬಿಜೆಪಿ ಹೇಳಿದೆ.

ಬಿಹಾರದಲ್ಲಿ ಬಿಜೆಪಿ ಉದಯ: ʻಬಿಹಾರದಲ್ಲಿ ಬಿಜೆಪಿಯ ಉದಯ ಮತ್ತು ಯಶಸ್ಸಿನಲ್ಲಿ ಸುಶೀಲ್ ಕುಮಾರ್ ಮೋದಿ ಅಮೂಲ್ಯ ಪಾತ್ರ ವಹಿಸಿದ್ದರುʼ ಎಂದು ಪ್ರಧಾನಿ ಹೇಳಿದ್ದಾರೆ. ʻವಿದ್ಯಾರ್ಥಿ ರಾಜಕೀಯದಲ್ಲಿ ಹೆಸರು ಮಾಡಿದ ಅವರು, ಪರಿಶ್ರಮಿ ಮತ್ತು ಸಮಾಜಮುಖಿ ಶಾಸಕರಾಗಿದ್ದರು. ಜಿಎಸ್‌ಟಿ ಜಾರಿಯಲ್ಲಿ ಅವರ ಸಕ್ರಿಯ ಪಾತ್ರ ಸ್ಮರಣೀಯʼ ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

1990 ರಲ್ಲಿ ಪಾಟ್ನಾ ಸೆಂಟ್ರಲ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಅವರು, ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾದರು. 1996 ರಿಂದ 2004 ರವರೆಗೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು 2004ರಲ್ಲಿ ಭಾಗಲ್ಪುರದಿಂದ ಲೋಕಸಭೆಗೆ ಆಯ್ಕೆಯಾದರು. 2005 ರಲ್ಲಿ ಲೋಕಸಭೆ ಸದಸ್ಯತ್ವವನ್ನು ತ್ಯಜಿಸಿ, ವಿಧಾನ ಪರಿಷತ್ತಿನ ಸದಸ್ಯರಾದರು. ಆನಂತರ ನಿತೀಶ್ ಕುಮಾರ್ ಸರ್ಕಾರದಲ್ಲಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಯಿತು. 2020ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ, 2024ರ ಜನವರಿಯಲ್ಲಿ ನಿವೃತ್ತರಾದರು.

ಸಂತಾಪಗಳ ಸುರಿಮಳೆ: ಬಿಹಾರ ರಾಜಕೀಯದ ಮಹಾನ್ ಪ್ರವರ್ತಕನನ್ನು ಶಾಶ್ವತವಾಗಿ ಕಳೆದುಕೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ರಕ್ಷಣಾ ಸಚಿ

ವ ರಾಜನಾಥ್ ಸಿಂಗ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸಂತಾಪ ವ್ಯಕ್ತಪಡಿಸಿದ್ದಾರೆ.

Read More
Next Story