
ಚುನಾವಣೆ ಗೆಲ್ಲಲು ಬಿಜೆಪಿಯಿಂದ ಸುಳ್ಳಿನ ಜಾಲ: ಮಮತಾ
ಮೇ 6- ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸುಳ್ಳಿನ ನೀಲನಕ್ಷೆ ಸಿದ್ಧಪಡಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆರೋಪಿಸಿದರು.
ಟಿಎಂಸಿಯ ಬಿರ್ಭೂಮ್ ಅಭ್ಯರ್ಥಿ, ಹಾಲಿ ಸಂಸದ ಶತಾಬ್ದಿ ರಾಯ್ ಅವರ ಪರ ಸಾಂಥಿಯಾದಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿದರು.
ʻಬಿಜೆಪಿಯಲ್ಲಿ ಇಬ್ಬರು ಉನ್ನತ ರಾಷ್ಟ್ರೀಯ ಮಟ್ಟದ ನಾಯಕರು ಇದ್ದಾರೆ. ಅವರು ಇಡೀ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಆದರೆ, ತಮ್ಮ ಪಾಪಗಳನ್ನು ಮರೆಮಾಡಲು ಬಂಗಾಳವನ್ನು ದೂಷಿಸುತ್ತಾರೆʼ ಎಂದು ಆರೋಪಿಸಿದರು. ʻಸುಳ್ಳುಗಳನ್ನು ಹರಡುವ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ನೀಲನಕ್ಷೆ ಸಿದ್ಧಪಡಿಸಿದೆ. ಗಲಭೆಯ ಸಂಚುಕೋರ ಪ್ರಧಾನಿ ಅವರಿಗೆ ಮತ ಹಾಕುತ್ತೀರಾ? ಸಂದೇಶಖಾಲಿ ಬಗ್ಗೆ ಬಿಜೆಪಿ ಸುಳ್ಳು ನಿರೂಪಣೆ ಹೆಣೆದಿದೆ. ನೀವು (ಬಿಜೆಪಿ) ಬಂಗಾಳದ ಕೋಟಿಗಟ್ಟಲೆ ತಾಯಂದಿರು ಮತ್ತು ಸಹೋದರಿಯರಿಗೆ ಅಗೌರವ, ಅವಮಾನ ಮಾಡಿದ್ದೀರಿ. ದೂರು ನೀಡಲು ಹಣದ ಆಮಿಷ ಒಡ್ಡಿದ್ದೀರಿ. ಇಂತಹ ಕೃತ್ಯಕ್ಕೆ ನಾಚಿಕೆಯಾಗಬೇಕುʼ ಎಂದು ಹೇಳಿದರು.
ʻಮೋದಿ ಸರ್ಕಾರವು ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಜಾಹೀರಾತುಗಳಿಗಾಗಿ ಕೋಟಿಗಟ್ಟಲೆ ರೂ. ಖರ್ಚು ಮಾಡುತ್ತಿದೆ. ಆದರೆ, ಬಂಗಾಳದ ಬಡವರಿಗೆ ಹಣ ತಡೆಹಿಡಿಯುತ್ತಿದೆʼ ಎಂದು ಆರೋಪಿಸಿದರು.