
ಎಂಡಿಎಚ್, ಎವರೆಸ್ಟ್ ಮಸಾಲೆ ನಿಷೇಧ: ಆಹಾರ ನಿಯಂತ್ರಕರಿಂದ ವಿವರ ಕೋರಿದ ಸರ್ಕಾರ
ಹೊಸದಿಲ್ಲಿ: ಭಾರತೀಯ ಬ್ರಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್‌ನ ಕೆಲವು ಮಸಾಲೆಗಳನ್ನು ಸಿಂಗಾಪುರ ಮತ್ತು ಹಾಂಗ್‌ಕಾಂಗ್ ನಿಷೇಧಿಸಿದೆ. ವಾಣಿಜ್ಯ ಸಚಿವಾಲಯ ಈ ಸಂಬಂಧ ಆ ದೇಶಗಳ ಆಹಾರ ಸುರಕ್ಷತಾ ನಿಯಂತ್ರಕರಿಂದ ವಿವರಗಳನ್ನು ಕೇಳಿದೆ.
ಭಾರತ ಸಂಬಾರ ಪದಾರ್ಥಗಳ ಅತಿ ದೊಡ್ಡಉತ್ಪಾದಕ, ಗ್ರಾಹಕ ಮತ್ತು ರಫ್ತುದಾರ ದೇಶ. ವಾಣಿಜ್ಯ ಸಚಿವಾಲಯವು ಸಿಂಗಾಪುರ ಮತ್ತು ಹಾಂಗ್ ಕಾಂಗ್ ನ ಭಾರತೀಯ ರಾಯಭಾರಿ ಕಚೇರಿಗಳಿಗೆ ಈ ಕುರಿತು ವಿಸ್ತೃತ ವರದಿಯನ್ನು ಕಳುಹಿಸಲು ಸೂಚಿಸಿದೆ. ಎಂಡಿಎಚ್ ಮತ್ತು ಎವರೆಸ್ಟ್ ನ ಉತ್ಪನ್ನಗಳು ನಿಗದಿಪಡಿಸಿದ ಮಿತಿಗಳನ್ನು ಮೀರಿ 'ಎಥಿಲೀನ್ ಆಕ್ಸೈಡ್' ಕೀಟನಾಶಕ ಹೊಂದಿವೆ ಎಂಬ ಆರೋಪದ ಮೇಲೆ ನಿಷೇಧಿಸಲಾಗಿದೆ.
ʻಕಂಪನಿಗಳಿಂದ ವಿವರ ಕೇಳಲಾಗಿದೆ. ನಿರ್ಬಂಧದ ಮೂಲ ಕಾರಣ ಮತ್ತು ಸರಿಪಡಿಸುವ ಕ್ರಮ ಕುರಿತು ಸಂಬಂಧಪಟ್ಟ ರಫ್ತುದಾರರೊಂದಿಗೆ ಚರ್ಚಿಸಲಾಗುತ್ತದೆʼ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
ಮಾಹಿತಿ ಕೋರಿಕೆ: ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿರುವ ರಾಯಭಾರ ಕಚೇರಿಗಳಿಂದ ತಾಂತ್ರಿಕ ವಿವರ, ವಿಶ್ಲೇಷಣಾತ್ಮಕ ವರದಿ ಮತ್ತು ಉತ್ಪನ್ನಗಳನ್ನು ತಿರಸ್ಕರಿಸಿದ ರಫ್ತುದಾರರ ಮಾಹಿತಿ ಕೋರಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸಿಂಗಾಪುರ್ ಫುಡ್ ಏಜೆನ್ಸಿ ಮತ್ತು ಸೆಂಟರ್ ಫಾರ್ ಫುಡ್ ಸೇಫ್ಟಿ ಮತ್ತು ಹಾಂಗ್ ಕಾಂಗ್‌ನ ಆಹಾರ ಮತ್ತು ಪರಿಸರ ನೈರ್ಮಲ್ಯ ಇಲಾಖೆಯಿಂದ ವಿವರಗಳನ್ನು ಕೇಳಲಾಗಿದೆ ಎಂದು ಅಧಿಕಾರಿ ಹೇಳಿದರು.
ಸಿಂಗಾಪುರ ಮತ್ತು ಹಾಂಗ್ ಕಾಂಗ್‌ಗೆ ಕಳಿಸುವ ಸಂಬಾರ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ನ್ನು ಕಡ್ಡಾಯವಾಗಿ ಪರೀಕ್ಷಿಸುವ ವಿಷಯ ಚರ್ಚಿಸಲು ಉದ್ಯಮ ಸಮಾಲೋಚನೆಯನ್ನು ನಿಗದಿಪಡಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ. ಸಂಬಾರ ಮಂಡಳಿಯಿಂದ ಪರಿಶೀಲನೆ: ಏತನ್ಮಧ್ಯೆ, ಎಂಡಿಎಚ್ ಮತ್ತು ಎವರೆಸ್ಟ್‌ನ ನಾಲ್ಕು ಮಸಾಲೆ ಮಿಶ್ರಿತ ಉತ್ಪನ್ನಗಳ ಮಾರಾಟದ ಮೇಲಿನ ನಿಷೇಧವನ್ನು ಭಾರತೀಯ ಸಂಬಾರ ಮಂಡಳಿ ಪರಿಶೀಲಿಸುತ್ತಿದೆ.
ಹಾಂಗ್ ಕಾಂಗ್‌ನ ಆಹಾರ ಸುರಕ್ಷತಾ ನಿಯಂತ್ರಕರು ಈ ಉತ್ಪನ್ನಗಳನ್ನು ಖರೀದಿಸದಂತೆ ಗ್ರಾಹಕರನ್ನು ಮತ್ತು ಮಾರಾಟ ಮಾಡದಂತೆ ವ್ಯಾಪಾರಿಗಳನ್ನು ಕೇಳಿಕೊಂಡಿದ್ದಾರೆ. ಸಿಂಗಾಪುರ ಫುಡ್ ಏಜೆನ್ಸಿಯು ಉತ್ಪನ್ನಗಳನ್ನು ಹಿಂಪಡೆಯಲು ಆದೇಶಿಸಿದೆ.
ಮಸಾಲೆ ಮಾದರಿ ಸಂಗ್ರಹಿಸಲು ನಿರ್ದೇಶನ: ಕೇಂದ್ರ ಸರ್ಕಾರ ದೇಶದ ಎಲ್ಲ ಉತ್ಪಾದನೆ ಘಟಕಗಳಿಂದ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಲು ಆಹಾರ ಆಯುಕ್ತರಿಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ. ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ನಿಯಂತ್ರಕರು ಎಂಡಿಎಚ್ ಮತ್ತು ಎವರೆಸ್ಟ್‌ನ ಕೆಲವು ಉತ್ಪನ್ನಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಪದಾರ್ಥಗಳನ್ನು ಒಳಗೊಂಡಿದೆ ಎಂದು ನಿಷೇಧ ಹೇರಿದ ಬಳಿಕ ಈ ಕ್ರಮಕ್ಕೆ ಮುಂದಾಗಿದೆ.
ʻ'ದೇಶದ ಎಲ್ಲ ಆಹಾರ ಆಯುಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಮಸಾಲೆ ಪದಾರ್ಥಗಳ ಮಾದರಿ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದೆ. ಮೂರ್ನಾಲ್ಕು ದಿನಗಳಲ್ಲಿ ದೇಶದ ಎಲ್ಲಾ ತಯಾರಿಕಾ ಘಟಕಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುವುದು, ʼಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ʻಎಂಡಿಎಚ್ ಮತ್ತು ಎವರೆಸ್ಟ್ ಮಾತ್ರವಲ್ಲ; ಎಲ್ಲಾ ಮಸಾಲೆ ತಯಾರಿಕೆ ಕಂಪನಿಗಳಿಂದ ಮಾದರಿ ಸಂಗ್ರಹಿಸಲಾಗುತ್ತದೆ. ಸುಮಾರು 20 ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಬರಲಿದೆʼ ಎಂದು ಮೂಲಗಳು ತಿಳಿಸಿವೆ.
ಒಂದನೇ ಗುಂಪಿನ ಕ್ಯಾನ್ಸರ್ ಕಾರಕ: ಇಂಟರ್‌ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್, ಎಥಿಲೀನ್ ಆಕ್ಸೈಡ್ ಅನ್ನು 'ಗ್ರೂಪ್ 1 ಕಾರ್ಸಿನೋಜೆನ್' ಎಂದು ವರ್ಗೀಕರಿಸಿದೆ. ಭಾರತದಲ್ಲಿ ಆಹಾರ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ಬಳಕೆ ನಿಷೇಧಿಸಲಾಗಿದೆ. ʻಭಾರತೀಯ ಮಸಾಲೆಗಳಲ್ಲಿ ಹಾನಿಕರ ಪದಾರ್ಥಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕ್ರಿಮಿನಲ್ ಮೊಕದ್ದಮೆಗೂ ಅವಕಾಶವಿದೆʼ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಉತ್ಪನ್ನಗಳಿಗೆ ಯಾವುದೇ ಹಾನಿಕರ ಅಂಶಗಳನ್ನು ಸೇರಿಸಬಾರದು ಎಂದು ಜಾಗೃತಿ ಮೂಡಿಸಲು ಸಂಬಾರ ಮಂಡಳಿಗೆ ಮನವಿ ಮಾಡಿದೆ. 2022-23ರ ಹಣಕಾಸು ವರ್ಷದಲ್ಲಿ ದೇಶ ಸುಮಾರು 32,000 ಕೋಟಿ ರೂ. ಮೌಲ್ಯದ ಸಂಬಾರ ಪದಾರ್ಥಗಳನ್ನು ರಫ್ತು ಮಾಡಿದೆ. ಮೆಣಸಿನ ಕಾಯಿ, ಜೀರಿಗೆ, ಒಲಿಯೋರೆಸಿನ್, ಅರಿಶಿನ, ಸಾರಿನ ಪುಡಿ ಮತ್ತು ಏಲಕ್ಕಿ ರಫ್ತು ಮಾಡುವ ಪ್ರಮುಖ ಸಂಬಾರ ಪದಾರ್ಥಗಳಾಗಿವೆ.