ರಾಮಮಂದಿರ ಚರ್ಚೆಯ ವಿಷಯವಲ್ಲ : ಶರದ್ ಪವಾರ್
ಪುಣೆ, ಏಪ್ರಿಲ್ 19- ಅಯೋಧ್ಯೆಯಲ್ಲಿ ರಾಮಮಂದಿರದ ವಿಷಯವನ್ನು ಇನ್ನು ಮುಂದೆ ಯಾರೂ ಚರ್ಚಿಸುವುದಿಲ್ಲ.ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಇದರಿಂದ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಪುಣೆ ಜಿಲ್ಲೆಯ ಪುರಂದರದಲ್ಲಿ ಗುರುವಾರ ಸುದ್ದಿಗಾರರ ʻಚುನಾವಣೆಯಲ್ಲಿ ರಾಮ ಮಂದಿರ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆಯೇ?ʼ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ʻಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಆಗಿದೆ. ಈಗ ಯಾರೂ ಅದರ ಬಗ್ಗೆ ಚರ್ಚಿಸುವುದಿಲ್ಲʼ ಎಂದು ಹೇಳಿದರು. ʻಸಭೆಯೊಂದರಲ್ಲಿ ಕೆಲವು ಮಹಿಳೆಯರು ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರೂ. ಸೀತಾದೇವಿಯ ವಿಗ್ರಹವಿಲ್ಲ ಎಂದು ದೂರಿದರುʼ ಎಂದು ಪವಾರ್ ಹೇಳಿದರು.
ಆದರೆ, ಪವಾರ್ ಹೇಳಿಕೆಗೆ ಬಿಜೆಪಿಯಿಂದ ಟೀಕೆ ವ್ಯಕ್ತವಾಗಿದೆ. ʻಮಾಜಿ ಮುಖ್ಯಮಂತ್ರಿ ರಾಮ ಮಂದಿರದ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಮಾಹಿತಿ ಸಂಗ್ರಹಿಸಬೇಕಿತ್ತು. ಶ್ರೀರಾಮ ಮಗುವಿನ ರೂಪದಲ್ಲಿ ಇದ್ದಾನೆ. ಆದರೆ, ಪವಾರ್ ಸಾಹೇಬರು ಅದರ ಮೇಲೆ ರಾಜಕೀಯ ಮಾಡುತ್ತಿ ದ್ದಾರೆʼ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಹೇಳಿದ್ದಾರೆ.
ʻಸೊಸೆಯನ್ನು ಹೊರಗಿನವರೆನ್ನುವ ಪವಾರ್, ಸೀತಾಮಾತೆ ಬಗ್ಗೆ ಕಾಳಜಿ ತೋರಿಸುವುದು ಬೂಟಾಟಿಕೆಯ ಪರಮಾವಧಿಯೇ ಹೊರತು ಬೇರೇನೂ ಅಲ್ಲʼ ಎಂದು ಬಾವಂಕುಲೆ ಹೇಳಿದ್ದಾರೆ. ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಮಹಾರಾಷ್ಟ್ರ ಉಪ ಮುಖ್ಯ ಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಗುರಿಯಾಗಿಸಿ ಪವಾರ್ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಮಗಳು ಸುಳೆ ಅವರಿಗೆ ಬೆಂಬಲ ಕೋರಿದ ಶರದ್ ಪವಾರ್,ʻ ಕಣದಲ್ಲಿ ಮೂಲ ಪವಾರ್ ಮತ್ತು ಹೊರಗಿನಿಂದ ಬಂದ ಇನ್ನೊಬ್ಬರು ಇದ್ದಾರೆʼ ಎಂದು ಹೇಳಿದರು.