ಕನಿಷ್ಠ ನನ್ನ ಅಂತ್ಯಕ್ರಿಯೆಗೆ ಬನ್ನಿ: ತವರಿನಲ್ಲಿ ಭಾವುಕರಾದ ಖರ್ಗೆ
x

'ಕನಿಷ್ಠ ನನ್ನ ಅಂತ್ಯಕ್ರಿಯೆಗೆ ಬನ್ನಿ': ತವರಿನಲ್ಲಿ ಭಾವುಕರಾದ ಖರ್ಗೆ


ಕಲಬುರಗಿ (ಕರ್ನಾಟಕ), ಏ. 24- ತಾವು ಏನಾದರೂ ಕೆಲಸ ಮಾಡಿದ್ದೇನೆ ಎಂದು ಕಲಬುರಗಿಯ ಜನ ಭಾವಿಸಿದ್ದರೆ, ತಮ್ಮ ಅಂತ್ಯಕ್ರಿಯೆಯಲ್ಲಾದರೂ ಪಾಲ್ಗೊಳ್ಳಿ ಎಂದು ಕಾಂಗ್ರೆಸ್ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ, ತವರು ಜಿಲ್ಲೆಯಲ್ಲಿ ಭಾವುಕರಾಗಿ ಮನವಿ ಮಾಡಿದರು.

ಜಿಲ್ಲೆಯ ಅಫಜಲಪುರದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿ, ʻಜನರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದಿದ್ದರೆ ಕಲಬುರಗಿಯಲ್ಲಿ ತನಗೆ ಯಾವುದೇ ಸ್ಥಾನವಿಲ್ಲ ಎಂದು ಭಾವಿಸುತ್ತೇನೆʼ ಎಂದು ಹೇಳಿದರು. 2009 ಮತ್ತು 2014 ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅವರು 2019 ರಲ್ಲಿ ವಿಫಲರಾದರು.

ʻಈ ಬಾರಿ ನಿಮ್ಮ ಮತವನ್ನು ಕಾಂಗ್ರೆಸ್ಸಿಗೆ ಹಾಕದಿದ್ದರೆ ನನಗೆ ಇಲ್ಲಿ ಸ್ಥಾನವಿಲ್ಲ ಎಂದು ಭಾವಿಸುತ್ತೇನೆ. ನಿಮ್ಮ ಹೃದಯವನ್ನು ಗೆಲ್ಲಲು ಆಗಲಿಲ್ಲ ಎಂದುಕೊಳ್ಳುತ್ತೇನೆ. ಕಾಂಗ್ರೆಸ್ಸಿಗೆ ಮತ ಹಾಕುತ್ತೀರೋ ಇಲ್ಲವೋ, ಕಲಬುರಗಿಗಾಗಿ ಕೆಲಸ ಮಾಡಿದ್ದೇನೆ ಎಂದು ಭಾವಿಸಿದರೆ, ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ’ ಎಂದು ಹೇಳಿದರು.

ʻಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವನ್ನು ಸೋಲಿಸಲು ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ನಾನು ರಾಜಕೀಯಕ್ಕಾಗಿ ಹುಟ್ಟಿದ್ದೇನೆ. ಚುನಾವಣೆಗೆ ಸ್ಪರ್ಧಿಸಲಿ ಅಥವಾ ಇಲ್ಲದಿರಲಿ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನನ್ನ ಕೊನೆಯ ಉಸಿರು ಇರುವವರೆಗೂ ಶ್ರಮಿಸುತ್ತೇನೆ. ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ,ʼ ಎಂದು ಖರ್ಗೆ ಹೇಳಿದರು.

ʻವ್ಯಕ್ತಿ ಒಂದು ಸ್ಥಾನ-ಹುದ್ದೆಯಿಂದ ನಿವೃತ್ತಿ ಆಗುತ್ತಾರೆ. ಆದರೆ, ತತ್ವಗಳಿಂದ ನಿವೃತ್ತರಾಗಬಾರದು. ನಾನು ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವನ್ನು ಸೋಲಿಸಲು ಹುಟ್ಟಿದ್ದೇನೆಯೇ ಹೊರತು ಅವರ ಮುಂದೆ ಶರಣಾಗಲು ಅಲ್ಲʼ ಎಂದು ಹೇಳಿದರು.

ತಮ್ಮೊಂದಿಗೆ ವೇದಿಕೆ ಹಂಚಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ತತ್ವಾದರ್ಶಗಳನ್ನು ಅನುಸರಿಸುವಂತೆ ಸಲಹೆ ನೀಡಿದರು. ʻನೀವು ಸಿಎಂ ಅಥವಾ ಶಾಸಕರಾಗಿ ನಿವೃತ್ತರಾಗಬಹುದು. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತವನ್ನು ಸೋಲಿಸುವವರೆಗೆ ರಾಜಕೀಯದಿಂದ ನಿವೃತ್ತಿ ಹೊಂದಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಪದೇ ಪದೇ ಹೇಳುತ್ತೇನೆ ʼಎಂದು ಹೇಳಿದರು.

ಬಿಜೆಪಿಯ ಹಾಲಿ ಸಂಸದ ಉಮೇಶ್ ಜಾಧವ್ ವಿರುದ್ಧ ಕಾಂಗ್ರೆಸ್ ಕಲಬುರಗಿಯಿಂದ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಿದೆ.

Read More
Next Story