ಕೋವಿಶೀಲ್ಡ್ ಹಿಂಪಡೆದ ಆಸ್ಟ್ರಾಜೆನೆಕಾ:  ವಾಣಿಜ್ಯ ಕಾರಣಗಳ ಉಲ್ಲೇಖ
x

ಕೋವಿಶೀಲ್ಡ್ ಹಿಂಪಡೆದ ಆಸ್ಟ್ರಾಜೆನೆಕಾ: ವಾಣಿಜ್ಯ ಕಾರಣಗಳ ಉಲ್ಲೇಖ

ಇಂಗ್ಲೆಂಡಿನಲ್ಲಿ ಕಂಪನಿ 100 ದಶಲಕ್ಷ ಪೌಂಡ್ ಮೊಕದ್ದಮೆ ಎದುರಿಸುತ್ತಿದೆ.


ಔಷಧ ಕ್ಷೇತ್ರದ ದೈತ್ಯ ಸಂಸ್ಥೆ ಅಸ್ಟ್ರಾಜೆನೆಕಾ, ವ್ಯಾಪಕವಾಗಿ ಬಳಕೆಯಾದ ಕೋವಿಡ್ -19 ಲಸಿಕೆ ಕೋವಿಶೀಲ್ಡ್ ನ್ನು ಜಾಗತಿಕ ಮಾರುಕಟ್ಟೆಯಿಂದ ಹಿಂತೆಗೆದುಕೊಂಡಿದೆ. ಲಸಿಕೆ ʻಅಪರೂಪದ ಪ್ರಕರಣಗಳಲ್ಲಿ ಅಡ್ಡ ಪರಿಣಾಮ ಉಂಟುಮಾಡಬಹುದುʼ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡ ಕೆಲವು ವಾರಗಳ ವಾಪಸಾತಿ ನಡೆದಿದೆ.

ʻದಿ ಟೆಲಿಗ್ರಾಫ್‌ ʼ ವರದಿ ಪ್ರಕಾರ, ಲಸಿಕೆ ಹಿಂಪಡೆಯಲು ಆಸ್ಟ್ರಾಜೆನೆಕಾ ʻವಾಣಿಜ್ಯ ಕಾರಣʼಗಳನ್ನು ಉಲ್ಲೇಖಿಸಿದೆ. ಈಗ ಮಾರುಕಟ್ಟೆಯಲ್ಲಿ ಹೆಚ್ಚು ನವೀಕರಿಸಿದ ಲಸಿಕೆಗಳು ಲಭ್ಯವಿವೆ ಎಂದು ಹೇಳಿದೆ. ನವೀಕರಿಸಿದ ಲಸಿಕೆ: ಕೋವಿಶೀಲ್ಡ್ ನ್ನು ಸ್ವೀಡ‌ನ್-‌ ಬ್ರಿಟನ್‌ ಡ್ರಗ್ ತಯಾರಕ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದೆ. ಭಾರತ ಮತ್ತು ಇತರ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಲಸಿಕೆಯನ್ನು ಕೋವಿಶೀಲ್ಡ್ ಹೆಸರಿನಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಪರವಾನಗಿ ಪಡೆದು ತಯಾರಿಸುತ್ತಿದೆ.

ನವೀಕರಿಸಿದ ಮತ್ತು ಪರಿಣಾಮಕಾರಿಯಾದ ಲಸಿಕೆಗಳು ಮಾರುಕಟ್ಟೆಯಲ್ಲಿ ಇರುವುದರಿಂದ ಕೋವಿಶೀಲ್ಡ್ ನ್ನು ಇನ್ನು ಮುಂದೆ ಉತ್ಪಾದಿಸದಿರಲು ಅಥವಾ ಪೂರೈಸದಿರಲು ನಿರ್ಧರಿಸಿರುವುದಾಗಿ ಕಂಪನಿ ಉಲ್ಲೇಖಿಸಿದೆ. ಜತೆಗೆ, ಕಂಪನಿಯು ಯುರೋಪಿಯನ್ ಒಕ್ಕೂಟದಲ್ಲಿ ಮಾರ್ಕೆಟಿಂಗ್ ಅಧಿಕಾರವನ್ನು ಹಿಂತೆಗೆದುಕೊಂಡಿದೆ. ಕಂಪನಿ ಪ್ರಕಾರ, ಲಸಿಕೆ ಹಿಂಪಡೆಯಲು ಮಾರ್ಚ್‌ 5ರಂದು ಅರ್ಜಿ ಸಲ್ಲಿಸಲಾಯಿತು.

ಆದರೆ, ಇಂಗ್ಲೆಂಡಿನಲ್ಲಿ ಕಂಪನಿ 100 ದಶಲಕ್ಷ ಪೌಂಡ್ ಮೊಕದ್ದಮೆ ಎದುರಿಸುತ್ತಿದೆ. ಲಸಿಕೆ ವಾಪಸಾತಿ ಕಾಕತಾಳೀಯ. ಮೊಕದ್ದಮೆಗೂ ವಾಪಸಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

100 ದಶಲಕ್ಷ ಪೌಂಡ್ ದಾವೆ: ಕೋವಿಡ್‌ಶೀಲ್ಡ್ ಹಲವಾರು ಜನರಿಗೆ ಸಾವು ಮತ್ತು ಅನಾರೋಗ್ಯಕ್ಕೆ ಕಾರಣವಾಯಿತು ಎಂದು ಆಸ್ಟ್ರಾಜೆನೆಕಾ ಇಂಗ್ಲೆಂಡಿನಲ್ಲಿ 100 ದಶಲಕ್ಷ ಪೌಂಡ್ ಮೊಕದ್ದಮೆ ಎದುರಿಸುತ್ತಿದೆ. ಒಂದು ಅಡ್ಡಪರಿಣಾಮವೆಂದರೆ ಟಿಟಿಎಸ್‌( ಥ್ರಂಬೋಸಿಸ್ ವಿತ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ - ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತದ ಪ್ಲೇಟ್‌ಲೆಟ್ ಕಡಿಮೆಯಾಗುವುದು) ಕಾರಣವಾಗುತ್ತದೆ. ಇದರಿಂದ ಇಂಗ್ಲೆಂಡಿನಲ್ಲಿ ಕನಿಷ್ಠ 81 ಸಾವು ಸಂಭವಿಸಿದೆ.

ಆದರೆ, ಫೆಬ್ರವರಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಲಸಿಕೆಯನ್ನು ಹಿಂಪಡೆಯಲು ನ್ಯಾಯಾಲಯದ ಪ್ರಕರಣಗಳು ಕಾರಣವಲ್ಲ ಎಂದಿದೆ. ಕಂಪನಿ ವಿರುದ್ಧ ಸುಮಾರು 51 ಪ್ರಕರಣಗಳು ದಾಖಲಾಗಿವೆ. 100 ದಶಲಕ್ಷ ಪೌಂಡ್‌ ಪರಿಹಾರ ಕೋರಲಾಗಿದೆ. ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆ ʻದೋಷಪೂರಿತʼ ಮತ್ತು ಅದರ ಪರಿಣಾಮಕಾರಿತ್ವವನ್ನು ʻಉಬ್ಬಿಸಲಾಗಿದೆʼ ಎಂದು ವಕೀಲರು ವಾದಿಸಿದರು. ಅಂದಾಜಿನ ಪ್ರಕಾರ, ಕಂಪನಿ ಮೊದಲ ವರ್ಷ ಮೂರು ಶತಕೋಟಿ ಡೋಸ್‌ ಲಸಿಕೆ ಸರಬರಾಜು ಮಾಡಿದೆ.

ʻಪ್ರೀತಿಪಾತ್ರರನ್ನು ಕಳೆದುಕೊಂಡ ಅಥವಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಬಗ್ಗೆ ನಮ್ಮ ಸಹಾನುಭೂತಿ ಇದೆ. ರೋಗಿಗಳ ಸುರಕ್ಷತೆ ನಮ್ಮ ಆದ್ಯತೆ. ಲಸಿಕೆ ಸೇರಿದಂತೆ ಎಲ್ಲ ಔಷಧಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸ್ಪಷ್ಟ ಮತ್ತು ಕಠಿಣ ಮಾನದಂಡಗಳನ್ನು ಅನುಸರಿಸಲಾಗುತ್ತದೆ,ʼ ಎಂದು ಕಂಪನಿ ಹೇಳಿದೆ.

Read More
Next Story