ಸಂಸತ್ತಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಕೋಟಾ ನೀಡಿ: ಓವೈಸಿ
ಸಂಸತ್ತಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಕೋಟಾ ನೀಡಬೇಕಿದೆ. ಅವರ ಪ್ರಾತಿನಿಧ್ಯವು ಅಪಾಯಕಾರಿಯಾಗಿ ಕಡಿಮೆಯಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಬಿಹಾರದ ಕಿಶನ್‌ಗಂಜ್‌ನಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಎಐಎಂಐಎಂನ ಪ್ರಾಂತೀಯ ಘಟಕದ ಮುಖ್ಯಸ್ಥ ಮತ್ತು ಶಾಸಕ ಅಖ್ತರುಲ್ ಇಮಾನ್ ಪರ ಪ್ರಚಾರ ನಡೆಸಿದರು.
ಮಹಿಳೆಯರ ವಿರುದ್ಧ ಅಲ್ಲ: ʻಮಹಿಳೆಯರ ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ಎಐಎಂಐಎಂ ಮೇಲೆ ಬಿಜೆಪಿ-ಆರ್‌ಎಸ್‌ಎಸ್ ಸುಳ್ಳು ಆರೋಪ ಮಾಡುತ್ತಿವೆ. 2004ರಲ್ಲೇ ನಾವು ಸಿಕಂದರಾಬಾದ್‌ನಲ್ಲಿ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೆವುʼ ಎಂದು ದಿವಂಗತ ಹುಮೇರಾ ಅಜೀಜ್ ಅವರನ್ನು ಉಲ್ಲೇಖಿಸಿ ಓವೈಸಿ ಹೇಳಿದರು.
ʻದೇಶದಲ್ಲಿ 17 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ಸಂಸದರಾದ ಮುಸ್ಲಿಂ ಮಹಿಳೆಯರ ಸಂಖ್ಯೆ ಕೇವಲ 20. ಹೀಗಿರುವಾಗ ಮುಸ್ಲಿಂ ಮಹಿಳೆಯರಿಗೆ ಏಕೆ ಮೀಸಲು ನೀಡಬಾರದು?ʼ ಎಂದು ಅವರು ಭಾನುವಾರ (ಏಪ್ರಿಲ್ 21) ಕೇಳಿದರು.
ಮಸೂದೆ ತಿದ್ದುಪಡಿ: ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ತಿದ್ದುಪಡಿ ತರುವಾಗ ಎದುರಿಸಿದ ಅಪಹಾಸ್ಯವನ್ನು ಓವೈಸಿ ನೆನಪಿಸಿಕೊಂಡರು. ʻನೀವು ತಿದ್ದುಪಡಿಯನ್ನು ತರಲು ಬಯಸುತ್ತೀರಿ. ಆದರೆ, ನಿಮ್ಮನ್ನು ಬೆಂಬಲಿಸಲು ಯಾರೂ ಇಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಅಲ್ಲಾ ನನ್ನೊಂದಿಗಿದ್ದಾನೆ ಎಂದು ನಾನು ಉತ್ತರಿಸಿದೆʼ ಎಂದು ಒವೈಸಿ ಸ್ಮರಿಸಿಕೊಂಡರು.
ಕಳಪೆ ಪ್ರಾತಿನಿಧ್ಯ: ʻಮುಸ್ಲಿಮರು ಮತ್ತು ಹಿಂದುಳಿದ ವರ್ಗಗಳು ಒಟ್ಟು ಸೇರಿ, ಜನಸಂಖ್ಯೆಯ ಶೇ.65 ರಷ್ಟಿದ್ದಾರೆ. ಈ ಮಹಿಳೆಯರ ಹಕ್ಕುಗಳನ್ನು ನಾವು ಕಸಿದುಕೊಳ್ಳಲು ಸಾಧ್ಯವಿಲ್ಲʼ ಎಂದು ಓವೈಸಿ ಹೇಳಿದರು.
ಬಿಹಾರ ಸಂಸತ್ತಿಗೆ 40 ಸದಸ್ಯರನ್ನು ಆಯ್ಕೆ ಮಾಡಲಿದ್ದು, ಹನ್ನೆರಡು ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಎಐಎಂಐಎಂ ಹೇಳಿದೆ.