ಕೇಜ್ರಿವಾಲ್ ಬಂಧನ: ಆಪ್ ಸಹಿ ಅಭಿಯಾನ
ಮೇ 2: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಪ್ರತಿಭಟಿಸಿ, ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಗುರುವಾರ ಸಹಿ ಅಭಿಯಾನ ಪ್ರಾರಂಭಿಸಿದೆ.
ಕೇಜ್ರಿವಾಲ್ ಮೇ 7 ರವರೆಗೆ ತಿಹಾರ್ ಜೈಲಿನಲ್ಲಿರಲಿದ್ದು, ಜನರು ತಮ್ಮ ಸಂದೇಶಗಳನ್ನು ಬರೆಯಲು ಲಜಪತ್ ನಗರದಲ್ಲಿ ಎರಡು ಬಿಳಿ ಫಲಕ ಇರಿಸಲಾಗಿದೆ. ʻದೆಹಲಿಯ ಜನರು ತಮ್ಮ ಮುಖ್ಯಮಂತ್ರಿಯನ್ನು ಪ್ರೀತಿಸುತ್ತಾರೆ ಎಂದು ಬಿಜೆಪಿಗೆ ತೋರಿಸಲು ನಗರದ ವಿವಿಧ ಭಾಗಗಳಲ್ಲಿ ಸಹಿ ಅಭಿಯಾನ ನಡೆಸಲಾಗುವುದು. ಅಭಿಯಾನವನ್ನು ಇಲ್ಲಿಂದ ಪ್ರಾರಂಭಿಸಿ, ವಿವಿಧ ಪ್ರದೇಶಗಳಿಗೆ ಕೊಂಡೊಯ್ಯುತ್ತೇವೆ. ಸಹಿ ಸಂಗ್ರಹಿಸಿ ಬಿಜೆಪಿಗೆ ಕಳುಹಿಸುತ್ತೇವೆ ಮತ್ತು ಜನರು ಕೇಜ್ರಿವಾಲ್ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂದು ತೋರಿಸುತ್ತೇವೆʼ ಎಂದು ಎಎಪಿ ಜಂಗ್ಪುರ ಶಾಸಕ ಪ್ರವೀಣ್ ಕುಮಾರ್ ಹೇಳಿದರು.
ʻಸಿಎಂ ಕೇಜ್ರಿವಾಲ್ ಅವರ ಬಂಧನದಿಂದ ದೆಹಲಿಯ ಜನರು ತೀವ್ರ ಕೋಪಗೊಂಡಿದ್ದಾರೆ. ಸರ್ವಾಧಿಕಾರ ಮತ್ತು ಅವರ ಬಂಧನದ ವಿರುದ್ಧ ತಮ್ಮ ಮತ ಚಲಾಯಿಸುತ್ತಾರೆʼ ಎಂದು ಎಎಪಿ ಪೂರ್ವ ದೆಹಲಿ ಲೋಕಸಭೆ ಅಭ್ಯರ್ಥಿ ಕುಲದೀಪ್ ಕುಮಾರ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಂದ 'ಜೈಲ್ ಕಾ ಜವಾಬ್ ವೋಟ್ ಸೇ ದೇಂಗೆ' ಮತ್ತು 'ಅರವಿಂದ್ ಕೇಜ್ರಿವಾಲ್ ಜಿಂದಾಬಾದ್' ಘೋಷಣೆಗಳು ಮೊಳಗಿದವು.